ಕಾರ್ಕಳ: ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ಜಾನುವಾರು ಕಳವು ಹಾಗೂ ವಧೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 29.09.2025ರಂದು ರಾತ್ರಿ 2.15 ಗಂಟೆ ಸುಮಾರಿಗೆ ಆರೋಪಿಗಳು ಫಿರ್ಯಾದಿದಾರರಾದ ಜಯಶ್ರೀ ಪೂಜಾರಿಯವರ ಮನೆಯ ಹಟ್ಟಿಗೆ ನುಗ್ಗಿ ಜಾನುವಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದರು. ಈ ವೇಳೆ ಎಚ್ಚರಗೊಂಡು ಬಂದ ಜಯಶ್ರೀ ಪೂಜಾರಿಯವರಿಗೆ ಆರೋಪಿಗಳು ತಲವಾರು ತೋರಿಸಿ ಬೆದರಿಕೆ ಹಾಕಿ, ಹಟ್ಟಿಯಲ್ಲಿದ್ದ ಮೂರು ಜಾನುವಾರುಗಳ ಹಗ್ಗಗಳನ್ನು ಕತ್ತರಿಸಿ ವಾಹನದಲ್ಲಿ ತುಂಬಿಸಿಕೊಂಡು ಕಳವು ಮಾಡಿಕೊಂಡು ಹೋಗಿ ವಧೆ ಮಾಡಿರುವುದು ತಿಳಿದುಬಂದಿದೆ. ಕಳವುಗೊಂಡ ಜಾನುವಾರುಗಳ ಒಟ್ಟು ಮೌಲ್ಯ ರೂ.35,000 ಆಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ತನಿಖೆ ನಡೆಸಿದ ಕಾರ್ಕಳ ವೃತ್ತದ ಸಿಪಿಐ ಅವರು ಆರೋಪಿಗಳಾದ ಮೊಹಮ್ಮದ್ ಯೂನಿಸ್ (31), ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಕು (29) ಮತ್ತು ನಾಸಿರ್ ಅಲಿಯಾಸ್ ಮೊಹಮ್ಮದ್ ನಾಸಿರ್ (28) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ಅವರು ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.




ಮುಂದಿನ ತನಿಖೆಯಲ್ಲಿ ಆರೋಪಿಗಳು ಸಂಘಟಿತವಾಗಿ ಕೃತ್ಯ ನಡೆಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೋಕಾ ಕಾಯ್ದೆ ಅನ್ವಯಿಸಲಾಗಿದೆ. ಬಳಿಕ ನ್ಯಾಯಾಲಯದಿಂದ ಆರೋಪಿಗಳ ಜಾಮೀನು ರದ್ದುಪಡಿಸಲಾಗಿದ್ದು, ಮೊಹಮ್ಮದ್ ಯೂನಿಸ್, ನಾಸಿರ್ ಅಲಿಯಾಸ್ ಮೊಹಮ್ಮದ್ ನಾಸಿರ್ ಹಾಗೂ ನಾಲ್ಕನೇ ಆರೋಪಿ ಶೌಕತ್ ಆಲಿ (36) ಅವರನ್ನು ಮರುಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪ್ರಸ್ತುತ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.





