ಉಡುಪಿ: ಉದ್ಯಾವರ ಪಾಪನಾಶಿನಿ ಹೊಳೆಯಲ್ಲಿ ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕರೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ರಿಯಾಜ್ ಕೆ.ಕೆ. (49) ಎಂದು ಗುರುತಿಸಲಾಗಿದೆ. ಅವರು ಕಾರ್ಕಳ ಕೆನರಾ ಬ್ಯಾಂಕ್ ಶಾಖೆಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ಮಣಿಪಾಲ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸುಮಾರು ಒಂದು ತಿಂಗಳ ಹಿಂದೆ ಕಾರ್ಕಳ ಶಾಖೆಗೆ ವರ್ಗಾವಣೆಯಾಗಿದ್ದು, ಪ್ರತಿದಿನ ಉಡುಪಿಯಿಂದ ಕಾರ್ಕಳಕ್ಕೆ ಸಂಚರಿಸುತ್ತಿದ್ದರು. ಈ ನಿರಂತರ ಪ್ರಯಾಣದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆ ಕೂಡ ಪಡೆದಿದ್ದರು ಎನ್ನಲಾಗಿದೆ.
ಜೂನ್ 26ರಂದು ಮೊಹರಂ ರಜೆ ಹಿನ್ನೆಲೆಯಲ್ಲಿ ಮನೆಯಲ್ಲಿ ಇದ್ದ ರಿಯಾಜ್ ಬೆಳಿಗ್ಗೆ 11 ಗಂಟೆ ಸುಮಾರಿಗೆ ದಿನಸಿ ತರಲು ಹೊರಟಿದ್ದು, ಮೊಬೈಲ್ ಫೋನ್ ಅನ್ನು ಮನೆಯಲ್ಲೇ ಬಿಟ್ಟು ತಮ್ಮ ಸ್ಕೂಟರ್‌ನಲ್ಲಿ ತೆರಳಿದ್ದರು. ಬಳಿಕ ರಾತ್ರಿ ತನಕ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಂಬಂಧಿಕರು ಹಾಗೂ ಪರಿಚಯಸ್ಥರಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ದೊರೆತಿರಲಿಲ್ಲ.
ಜೂನ್ 27ರ ಮುಂಜಾನೆ ಸುಮಾರು 1.30 ಗಂಟೆಗೆ ಕಾಪು ಪೊಲೀಸರು ಕರೆ ಮಾಡಿ, ಉದ್ಯಾವರ ಸೇತುವೆ ಬಳಿ ಅವರ ಸ್ಕೂಟರ್ ಹಾಗೂ ಸಮೀಪದ ಪಾಪನಾಶಿನಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪತ್ನಿ ರಸೀನಾ ಅವರು ಮೃತದೇಹವನ್ನು ತಮ್ಮ ಪತಿ ರಿಯಾಜ್ ಎಂದು ಗುರುತಿಸಿದರು.
ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಸಂಖ್ಯೆ 20/2026ರಡಿ ಬಿಎನ್‌ಎಸ್‌ಎಸ್ ಕಲಂ 194 ಅನ್ವಯ ಪ್ರಕರಣ ದಾಖಲಿಸಿಕೊಂಡು, ಸಾವಿನ ನಿಖರ ಕಾರಣದ ಕುರಿತು ತನಿಖೆ ನಡೆಸಲಾಗುತ್ತಿದೆ.




