ಭಟ್ಕಳ (ಮಾರ್ಚ್ 29): ತಾಲೂಕಿನ ನವೈತ್ ಕಾಲೋನಿ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಕಪ್ಪು ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ವೃದ್ಧರೊಬ್ಬರ ಮೇಲೆ ದಾಳಿ ನಡೆಸಲು ಯತ್ನಿಸಿದ ಘಟನೆ ವರದಿಯಾಗಿದೆ. ಸಕಾಲಿಕ ಮಧ್ಯಪ್ರವೇಶದಿಂದ ದೊಡ್ಡ ಮಟ್ಟದ ಅನಾಹುತವೊಂದು ತಪ್ಪಿದೆಯಾದರೂ, ಈ ಘಟನೆಯಿಂದಾಗಿ ಸ್ಥಳೀಯರಲ್ಲಿ ತೀವ್ರ ಭೀತಿ ಆವರಿಸಿದೆ.
ಶನಿವಾರ ಸಂಜೆ ಇಶಾ ನಮಾಜ್ ಮುಗಿಸಿ ಮರಿಯಮ್ ಅಲಿ ಮಸೀದಿಯ ಹಿಂಭಾಗವಿರುವ ತಮ್ಮ ಮನೆಗೆ ಮರಳುತ್ತಿದ್ದ ಹಸನ್ ಸಾಹಿಬ್ ಎಂಬುವವರ ಮೇಲೆ ಪೊದೆಯಲ್ಲಿ ಅವಿತಿದ್ದ ಕಪ್ಪು ಚಿರತೆ ಏಕಾಏಕಿ ಎರಗಲು ಯತ್ನಿಸಿದೆ. ಈ ವೇಳೆ ಅವರು ಗಾಬರಿಯಿಂದ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅವರ ಪುತ್ರ ಶಫಿ ಬೊಬ್ಬೆ ಹೊಡೆದಾಗ, ಚಿರತೆಯು ಹತ್ತಿರದ ಪೊದೆಯೊಳಗೆ ಓಡಿ ಕಣ್ಮರೆಯಾಗಿದೆ.
ಇದಾದ ಸುಮಾರು ಒಂದು ಗಂಟೆಯ ನಂತರ, ಅದೇ ಪ್ರದೇಶದ ಮತ್ತೊಬ್ಬ ನಿವಾಸಿ ಬಶೀರ್ ಅಹ್ಮದ್ ಎಂಬುವವರು ತಮ್ಮ ಮನೆಯ ಹೊರಗೆ ಕುಳಿತಿದ್ದಾಗ ಚಿರತೆಯನ್ನು ಕಂಡಿದ್ದಾರೆ. ಜನರನ್ನು ಕಂಡೊಡನೆ ಚಿರತೆಯು ವೇಗವಾಗಿ ಮಾವಿನ ತೋಟದ ಕಡೆಗೆ ಧಾವಿಸಿದೆ.
ಅರಣ್ಯ ಇಲಾಖೆಯಿಂದ ತೀವ್ರ ಶೋಧ:
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಕೈಗೊಂಡರು. ಮರಿಯಮ್ ಅಲಿ ಮಸೀದಿ ಪರಿಸರದಿಂದ ಹಿಡಿದು ಮಾವಿನ ತೋಟದವರೆಗಿನ ಅರಣ್ಯ ಪ್ರದೇಶದಲ್ಲಿ ಹೈ-ಪವರ್ ಬ್ಯಾಟರಿ ದೀಪಗಳ ಸಹಾಯದಿಂದ ತಡರಾತ್ರಿಯವರೆಗೂ ಶೋಧ ನಡೆಸಲಾಯಿತು. ವನ್ಯಮೃಗವನ್ನು ಕಾಡಿನ ಕಡೆಗೆ ಓಡಿಸಲು ಪಟಾಕಿಗಳನ್ನು ಸಿಡಿಸಲಾಯಿತು.






