ಕಾಪು, ಜೂ.27: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರದ ಬಬ್ಬುಸ್ವಾಮಿ ದೇವಸ್ಥಾನದ ಎದುರು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಮೃತಪಟ್ಟಿದ್ದು, ಮತ್ತೋರ್ವರು ಗಾಯಗೊಂಡ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಮೃತರನ್ನು ಮೋನಿಷ್ ಅಂಚನ್ (42) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಮೋನಿಷ್ ಅಂಚನ್ ಹಾಗೂ ಅವರ ಸಂಬಂಧಿ ಗೀತೇಶ್ ಕಮಲಾಕ್ಷ ಸಾಲಿಯಾನ್ ಅವರು ಶುಕ್ರವಾರ ರಾತ್ರಿ ಕಟಪಾಡಿಗೆ ತೆರಳಿ ಸ್ಕೂಟರ್‌ಗೆ ಪೆಟ್ರೋಲ್ ತುಂಬಿಸಿಕೊಂಡು, ಬಳಿಕ ರಾಷ್ಟ್ರೀಯ ಹೆದ್ದಾರಿ 66 ಮೂಲಕ ಮನೆಗೆ ಹಿಂದಿರುಗುತ್ತಿದ್ದರು. ರಾತ್ರಿ ಸುಮಾರು 1 ಗಂಟೆ ವೇಳೆಗೆ ಉದ್ಯಾವರ ಗ್ರಾಮದ ಬಬ್ಬುಸ್ವಾಮಿ ದೇವಸ್ಥಾನದ ಎದುರು ತಲುಪಿದಾಗ, ಅವರ ಸ್ಕೂಟರ್‌ಗೆ ಹಿಂದಿನಿಂದ ಬಂದ KA-21 N-7983 ಸಂಖ್ಯೆಯ ರಿಟ್ಜ್ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ಇಬ್ಬರೂ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಗೀತೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಮೋನಿಷ್ ಅಂಚನ್ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೋನಿಷ್ ಅಂಚನ್ ಅವರು ಶನಿವಾರ ಮುಂಜಾನೆ ಸುಮಾರು 4 ಗಂಟೆಗೆ ಮೃತಪಟ್ಟಿದ್ದಾರೆ.
ಘಟನೆಯ ಕುರಿತು ಮೋನಿಷ್ ಅವರ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಕಾಪು ಪೊಲೀಸ್ ಠಾಣೆಯಲ್ಲಿ ಸ್ಟೀವನ್ ಡಿಸೋಜ ವಿರುದ್ಧ BNS ಕಲಂ 281, 125(a) ಹಾಗೂ 106(1) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




