ಉಡುಪಿ: ಜಿಲ್ಲೆಯ ಹೆಬ್ರಿ ತಾಲೂಕಿನ ಅಂಡಾರು ಗ್ರಾಮದಲ್ಲಿ ತೋಟದ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಗುಂಪು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಈ ಸಂಬಂಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಡಾರು ಗ್ರಾಮದ ಪದ್ಮ (30) ಅವರು ಮುಟ್ಲುಪಾಡಿ ನಿವಾಸಿ ಸುದರ್ಶನ ಶೆಟ್ಟಿಯವರ ಬಳಿ ಕೋಳಿ ಸಾಕಣೆ ಮತ್ತು ತೋಟದ ಕೆಲಸ ಮಾಡಿಕೊಂಡಿದ್ದರು. ಮಾರ್ಚ್ 26ರಂದು ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಸುದರ್ಶನ ಶೆಟ್ಟಿಯವರ ತೋಟದಲ್ಲಿ ಕೋಳಿಗಳನ್ನು ಗೂಡಿಗೆ ಹಾಕುತ್ತಿದ್ದಾಗ, ಒಂದು ಆಲ್ಟೋ ಕಾರು, ಒಂದು ಬಿಳಿ ಬಣ್ಣದ ಕಾರು ಹಾಗೂ ನಾಲ್ಕು ಬೈಕ್‌ಗಳಲ್ಲಿ ಬಂದ ಹರೀಶ, ಸುದೀರ, ದುರ್ಗಾ, ಗುರುದೀಶ ಮತ್ತು ಪ್ರತಾಪ ಸೇರಿದಂತೆ ಸುಮಾರು 15 ಜನರು ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಸುದರ್ಶನ ಶೆಟ್ಟಿಯವರನ್ನು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದಾರೆ. ಮಧ್ಯೆ ಪ್ರವೇಶಿಸಿದ ಪದ್ಮ ಹಾಗೂ ಆಕಾಶ ಅವರ ಮೇಲೂ ಹಲ್ಲೆ ನಡೆಸಲಾಗಿದೆ. ಅಲ್ಲದೆ ಹರೀಶ ಎಂಬಾತ ಜಾತಿ ನಿಂದನೆ ಮಾಡಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಹಲ್ಲೆಯಲ್ಲಿ ಗಾಯಗೊಂಡ ಪದ್ಮ, ಸುದರ್ಶನ ಶೆಟ್ಟಿ ಹಾಗೂ ಆಕಾಶರನ್ನು ಬಳಿಕ ಹೆಬ್ರಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೋಳಿಗಳ ಹಣ ಬಾಕಿ ಇರುವ ವಿಚಾರವೇ ಈ ಹಲ್ಲೆಗೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.





