ಉಡುಪಿ: ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಹೊರಡಿಸಿದ್ದ ಗಡಿಪಾರು ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತತ್ಕಾಲಿಕ ತಡೆ ನೀಡಿದೆ.
ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಮೂಡುಬೆಟ್ಟು ನಿವಾಸಿಯಾದ 34 ವರ್ಷದ ಭರತ್ ಜಯರಾಮ್ ದಾಸ್ ಎಂಬಾತನ ವಿರುದ್ಧ ಕೋಟ ಹಾಗೂ ಕುಂದಾಪುರ ಪೊಲೀಸ್ ಠಾಣೆಗಳಲ್ಲಿ ಅಕ್ರಮ ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿದ್ದವು.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಆತನನ್ನು ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವಂತೆ ಗಡಿಪಾರು ಆದೇಶ ಜಾರಿಗೊಳಿಸಿದ್ದರು.
ಆದರೆ, ಕರ್ನಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 59ರ ಅನ್ವಯ ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಆರೋಪಿಗೆ 30 ದಿನಗಳ ಕಾಲಾವಕಾಶವಿರುತ್ತದೆ. ಇದನ್ನು ಪರಿಗಣಿಸದೆ ಆದೇಶ ಹೊರಡಿಸಿದ ದಿನವೇ ಅದನ್ನು ತಕ್ಷಣದಿಂದ ಜಾರಿಗೆ ತರುವುದು ಕಾನೂನುಬಾಹಿರ ಎಂದು ಹೈಕೋರ್ಟ್ ನ್ಯಾಯಮೂರ್ತಿ ಲಲಿತಾ ಕಣ್ಣೇಗಂಟಿ ಅವರ ಏಕಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ.
ಆರೋಪಿಗೆ ಕಾನೂನುಬದ್ಧವಾಗಿ ಮೇಲ್ಮನವಿ ಸಲ್ಲಿಸಲು ಸೂಕ್ತ ಅವಕಾಶ ನೀಡದೆ ಗಡಿಪಾರು ಆದೇಶವನ್ನು ತಕ್ಷಣವೇ ಅನುಷ್ಠಾನಕ್ಕೆ ತಂದಿರುವುದು ನ್ಯಾಯಸಮ್ಮತವಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯವು, ಅರ್ಜಿದಾರರು 2026ರ ಜೂನ್ 12ರ ಒಳಗಾಗಿ ಗೃಹ ಇಲಾಖೆಯ ಮುಂದೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲಿಯವರೆಗೆ ಪೊಲೀಸರು ಹೊರಡಿಸಿರುವ ಗಡಿಪಾರು ಆದೇಶವು ಜಾರಿಯಲ್ಲಿರಬಾರದು ಎಂದು ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.




