ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಹತ್ಯೆ ಪ್ರಕರಣದ ಸಂಬಂಧ ಎಚ್.ಎಸ್.ಆರ್ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಂಬಂಧ ಓಂ ಪ್ರಕಾಶ್ ಅವರ ಪುತ್ರ ದೂರು ನೀಡಿದ್ದಾರೆ. ದೂರಿನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ತಂದೆಯ ಸಾವಿಗೆ ಕಾರಣರಾದವರ ಪತ್ತೆ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪ್ರಕರಣದ ತನಿಖೆ ನಡೆಸುವ ಜವಾಬ್ದಾರಿಯನ್ನು ಮಡಿವಾಳ ಎಸಿಪಿ ವಾಸುದೇವ್ ಅವರಿಗೆ ವಹಿಸಲಾಗಿದೆ.
ಪ್ರಕರಣದ ಸಂಬಂಧ ಓಂ ಪ್ರಕಾಶ್ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರನ್ನೂ ಭಾನುವಾರ ರಾತ್ರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಸೋಮವಾರ ಬೆಳಿಗ್ಗೆ ಇಬ್ಬರನ್ನೂ ಠಾಣೆಗೆ ಕರೆತಂದಾಗ ರಂಪಾಟ ನಡೆಸಿದರು. ‘ನಮ್ಮನ್ನು ಏಕೆ ವಶಕ್ಕೆ ಪಡೆದುಕೊಂಡಿದ್ದೀರಿ’ ಎಂದು ಪ್ರಶ್ನಿಸಿದರು. ಹೊಯ್ಸಳ ಜೀಪಿನಿಂದ ಕೆಳಕ್ಕೆ ಇಳಿಯದೇ ಜೀಪಿನಲ್ಲೇ ಕುಳಿತಿದ್ದರು. ಕೊನೆಗೂ ಅವರನ್ನು ಮನವೊಲಿಸಿ ಕೆಳಕ್ಕೆ ಇಳಿಸಿ ವಿಚಾರಣೆಗೆ ಕರೆದೊಯ್ಯಲು ಪೊಲೀಸರು ಯಶಸ್ವಿಯಾದರು.
ಇಂದು ಪತ್ನಿ ಮತ್ತು ಮಗಳನ್ನು ವಿಚಾರಣೆ ನಡೆಸಿ ಸಂಜೆ ವೇಳೆಗೆ ಕೋರ್ಟ್‌ಗೆ ಹಾಜರು ಪಡಿಸುವ ಸಾಧ್ಯತೆಯಿದೆ.
ಪಲ್ಲವಿ ಅವರನ್ನು ಭಾನುವಾರ ರಾತ್ರಿಯೇ ವೈದ್ಯಕೀಯ ಪರೀಕ್ಷೆಗೆ ಪೊಲೀಸರು ಒಳಪಡಿಸಿದ್ದರು. ತಪಾಸಣೆ ವೇಳೆ ಪಲ್ಲವಿ ಅವರಿಗೆ ಆರೋಗ್ಯ ಸಮಸ್ಯೆ ಇರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.
ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಓಂ ಪ್ರಕಾಶ್ ಅವರ ಕುಟುಂಬದವರ ಒಪ್ಪಿಗೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

