ಮಂಗಳೂರು: ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆಯಿಂದ ಲಾಭಾಂಶ ದೊರೆಯುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 44 ಲಕ್ಷ ರೂ. ವಂಚನೆ ಮಾಡಿರುವ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರನ್ನು ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಪರಿಚಯ ಮಾಡಿಕೊಂಡು ಇನ್‌ಟ್ರಾ ಟ್ರೇಡಿಂಗ್ ಆ್ಯಂಡ್ ಸ್ಟಾಕ್ ಮಾರ್ಕೆಟಿಂಗ್ ಬಗ್ಗೆ ತಿಳಿಸಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾನೆ.
ಮೊದಲಿಗೆ ನಿರಾಕರಿಸಿದರೂ ಬಳಿಕ ಆತನ ಪ್ರಚೋದನೆಗೆ ಒಳಗಾಗಿ ಸುಮಾರು 44 ಲಕ್ಷ ರೂ.ಗಳನ್ನು ಹಂತ ಹಂತವಾಗಿ ಹೂಡಿಕೆ ಮಾಡಿದ್ದಾರೆ.
ಅನಂತರದ ದಿನಗಳಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸ್ವಲ್ಪ ಮೊತ್ತವನ್ನು ಹಿಂದಕ್ಕೆ ಪಡೆದಿದ್ದಾರೆ. ಆದರೆ ಇನ್ನುಳಿದ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಇನ್ನೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದು, ಅನುಮಾನ ಬಂದು ಸ್ನೇಹಿತರಲ್ಲಿ ವಿಚಾರಿಸದಾಗ ಮೋಸ ಹೋಗಿರುವುದು ಅರಿವಾಗಿದೆ. ಬಳಿಕ ಸೆನ್ ಠಾಣೆಗೆ ದೂರು ನೀಡಿದ್ದಾರೆ.