Home Karavali Karnataka ವಿಧಾನಸೌಧದ ಮುಂದೆ ಈ ವರುಷವಾದರೂ ಸ್ಥಾಪನೆಗೊಳ್ಳಲಿ ನಾರಾಯಣಗುರುಗಳ ಪುತ್ಥಳಿ – ಪ್ರವೀಣ್ ಪೂಜಾರಿ…!!

ವಿಧಾನಸೌಧದ ಮುಂದೆ ಈ ವರುಷವಾದರೂ ಸ್ಥಾಪನೆಗೊಳ್ಳಲಿ ನಾರಾಯಣಗುರುಗಳ ಪುತ್ಥಳಿ – ಪ್ರವೀಣ್ ಪೂಜಾರಿ…!!

ಉಡುಪಿ: ಬಿಲ್ಲವರು ಮತ್ತು ಹಿಂದುಳಿದ ವರ್ಗದವರನ್ನು ಅಸ್ಪಶ್ಯರನ್ನಾಗಿ ಕಾಣುತ್ತಿದ್ದ ಅಂದಿನ ಸಮಾಜದಲ್ಲಿ, ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದ್ದ ಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ವಿಧಾನಸೌಧ ಮುಂದೆ ಸ್ಥಾಪಿಸುವ ಕನಸನ್ನು ಹುಟ್ಟಿಹಾಕಿದ ಸರಕಾರ ಮರೆತುಬಿಟ್ಟಿರುವುದು ವಿಪರ್ಯಾಸ ಎಂದು ಉಡುಪಿ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದುಳಿದ ವರ್ಗವನ್ನು ಹೀನಾಯವಾಗಿ ಕಾಣುತ್ತಿದ್ದ ಸಮಾಜದಲ್ಲಿ ಮಾನವ ಕುಲವೊಂದೇ. ಜಗದೊಳು, ಎಲ್ಲರೂ ಸಮಾನರು ಈ ಜಗದೊಳಗೆ ಮೇಲು-ಕೀಳು ಎಂಬುವುದಿಲ್ಲ ಭಗವಂತನು ಎಲ್ಲರಲ್ಲೂ ಇದ್ದಾನೆ, ಎಲ್ಲರ ರಕ್ತ ಒಂದೇ, ಎಲ್ಲರೂ ಉಸಿರಾಡುವ ಗಾಳಿ, ಬೆಳಕು ಕೊಡುವ ಸೂರ್ಯನೊಬ್ಬನೇ, ಒಂದೇ ಆಕಾಶ, ಕುಡಿಯುವ ನೀರು ಒಂದೇ ಎಂಬ ಸಂದೇಶದ ಮೂಲಕ ಅಸ್ಪಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದವರು ನಾರಾಯಣ ಗುರುಗಳು.

ಮನುಷ್ಯ, ಧರ್ಮದ ಹೆಸರಿನಲ್ಲಿ ದೇವರ ಹೆಸರಿನಲ್ಲಿ ಭೇದ ಮಾಡುವುದು ಸಲ್ಲ ಎಂದು ಪ್ರತಿಪಾದಿಸಿದ ಅಸಾಧಾರಣ ಮೇರು ವ್ಯಕ್ತಿತ್ವದ ಮಹಾನ್ ತತ್ವಜ್ಞಾನಿಯಾದ ಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪಿಸುತ್ತೇವೆಂದು ಭರವಸೆ ನೀಡಿದ ರಾಜಕಾರಣಿಗಳು ಮರೆತು ಬಿಟ್ಟಿದ್ದಾರೆ. ಈ ಬಾರಿ ನಾರಾಯಣಗುರುಗಳ ಜಯಂತಿಯನ್ನು ಸರಕಾರ, ವಿಶೇಷವಾಗಿ ಆಚರಿಸಿ, ಶ್ರೀಗಳ ಪುತ್ಥಳಿಯನ್ನು ಅನಾವರಣಗೊಳಿಸುವತ್ತ ಸರಕಾರ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.