ಆರೋಪಿಗಳೊಂದಿಗೆ ಪಿಎಫ್ಐ ನಂಟಿರುವ ಮಾಹಿತಿ ಎನ್‌ಐ ಎ ಗೆ ಲಭ್ಯ….
ಮಂಗಳೂರು: ಬಜಪೆ ಸಮೀಪದ ಕಿನ್ನಿಪದವು ಜಂಕ್ಷನ್ ಬಳಿ ಮೇ 1ರಂದು ನಡೆದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ಅಧಿಕಾರಿಗಳು ಈಗ ಕೃತ್ಯದ ಹಿಂದಿನ ಹಣಕಾಸಿನ ಮೂಲದ ಪತ್ತೆಗೆ ಎನ್‌ಐಎ ಮುಂದಾಗಿದೆ.
ಎನ್‌ಐಎ ಅಧಿಕಾರಿಗಳು ಈಗಾಗಲೇ 8 ಮಂದಿ ಪ್ರಮುಖ ಆರೋಪಿಗಳನ್ನು ಜು.1ರ ವರೆಗೆ ಕಸ್ಟಡಿಗೆ ಪಡೆದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಮಂಗಳೂರಿನ ಸಿಸಿಬಿ ಪೊಲೀಸರು ಈಗಾಗಲೇ ನಡೆಸಿರುವ ತನಿಖೆಯ ಎಲ್ಲ ದಾಖಲೆಗಳನ್ನು ಈಗಾಗಲೇ ಎನ್‌ಐಎಗೆ ಹಸ್ತಾಂತರ ಮಾಡಿದ್ದಾರೆ.
ಇದೀಗ ಆರೋಪಿಗಳು, ಕೃತ್ಯಕ್ಕೆ ಸಹಕರಿಸಿದವರು ಸೇರಿ ಎಲ್ಲ 12 ಆರೋಪಿಗಳ ಬ್ಯಾಂಕ್ ಖಾತೆ ವಿವರಗಳನ್ನು ಎನ್‌ಐಎ ಕಲೆ ಹಾಕಿದೆ. ಕೆಲವು ಸ್ಥಳೀಯರಿಂದಲೂ ಆರೋಪಿಗಳ ಬ್ಯಾಂಕ್ ಖಾತೆಗೆ ಹಣ ರವಾನೆಯಾಗಿರುವ ಬಗ್ಗೆಯೂ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಆರೋಪಿಗಳು ಮಾತ್ರವಲ್ಲದೆ, ಮನೆಯ ಇತರ ಸದಸ್ಯರ ಖಾತೆಗಳನ್ನೂ ಪರಿಶೀಲಿಸಲಾಗುತ್ತಿದೆ ಎನ್ನಲಾಗಿದೆ. ಎನ್‌ಐಎ ಡಿಐಜಿ ರಾಹುಲ್ ಹಾಗೂ ಎಸ್‌ಪಿ ಶಿವಕುಮಾರ್ ಅವರು ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದು, ಡಿಎಸ್‌ಪಿ ಪವನ್ ಕುಮಾರ್ ಅವರ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.
ಸುರತ್ಕಲ್‌ನಲ್ಲಿ ಹತ್ಯೆಯಾದ ಫಾಝಿಲ್‌ನ ಸಹೋದರ ಆದಿಲ್ ನೀಡಿರುವ 5 ಲಕ್ಷ ರೂ. ಹಣದಲ್ಲಿ ಈ ಹತ್ಯೆ ನಡೆದಿಲ್ಲ. ಸುಹಾಸ್ ಹತ್ಯೆ ಪ್ರಕರಓಣದಲ್ಲಿ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ವಿದೇಶದಿಂದಲೂ ಹಣ ಜಮೆಯಾಗಿದೆ ಎನ್ನುವ ಬಗ್ಗೆ ಹಿಂದೂ ಸಂಘಟನೆಗಳು, ಬಿಜೆಪಿ ನಾಯಕರು ಆರಂಭದಲ್ಲೇ ಆರೋಪಿಸಿದ್ದರು.
ನಿಷೇಧಿತ ಪಿಎಫ್‌ಐ ನಂಟಿನ ಸಾಕ್ಷ್ಯ ನಿಷೇಧಿತ ಪಿಎಫ್‌ಐ ಜತೆ ಈ ಹಿಂದೆ ಗುರುತಿಸಿಕೊಂಡು ವಿದೇಶದಲ್ಲಿರುವ ಕೆಲವರು ಹತ್ಯೆಗೆ ಹಣಕಾಸು ನೆರವು ನೀಡಿರುವ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳೊಂದಿಗೆ ಪಿಎಫ್ಐ ನಂಟಿರುವ ಮಾಹಿತಿ ಎನ್‌ಐ ಎ ಗೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.