ಸೌದಿ ಅರೇಬಿಯಾ : ಸೌದಿ ಅರೇಬಿಯಾ ಪೊಲೀಸರು ಮತ್ತು ಸುಲಿಗೆ ಗ್ಯಾಂಗ್ ವೊಂದರ ನಡುವೆ ನಡೆದ ಗುಂಡಿನ ಚಕಮಕಿ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಜಾರ್ಖಂಡ ನ ಯುವಕನೊಬ್ಬ ಸಾವನಪ್ಪಿದ ಘಟನೆ ನಡೆದಿದೆ.
ಮೃತರನ್ನು ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯ ದುಮ್ರಿ ಬ್ಲಾಕ್‌ನ ಮಧಗೋಪಾಲಿ ಪಂಚಾಯತ್ ವ್ಯಾಪ್ತಿಯ ದುಧ್‌ಪಾನಿಯಾ ಗ್ರಾಮದ ವಲಸೆ ಕಾರ್ಮಿಕ ವಿಜಯ್ ಕುಮಾರ್ ಮಹಾತೋ ಎಂದು ಗುರುತಿಸಲಾಗಿದೆ.
35 ವರ್ಷದ ವಿಜಯ್ ಕುಮಾರ್ ಮಹಾತೋ ಸೌದಿ ಅರೇಬಿಯಾದ ಹುಂಡೈ ಎಂಜಿನಿಯರಿಂಗ್ ಮತ್ತು ನಿರ್ಮಾಣ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.
ಅಕ್ಟೋಬರ್ 15 ರಂದು ಈ ಘಟನೆ ನಡೆದಿದೆ. ಕಂಪನಿಯ ಹಿರಿಯ ಅಧಿಕಾರಿಯ ಸೂಚನೆಯ ಮೇರೆಗೆ ಅವರು ಕೆಲಸದ ಸ್ಥಳಕ್ಕೆ ಸಾಮಗ್ರಿಗಳನ್ನು ಸಂಗ್ರಹಿಸಲು ಹೋಗಿದ್ದರು. ಆ ಸಮಯದಲ್ಲಿ ಸ್ಥಳೀಯ ಪೊಲೀಸರು ಮತ್ತು ಸುಲಿಗಕೋರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿತ್ತು, ಈ ವೇಳೆ ಅಲ್ಲೇ ಇದ್ದ ವಿಜಯ್ ಗೆ ಆಕಸ್ಮಿಕವಾಗಿ ಗುಂಡು ತಗುಲಿದೆ.
ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ವಿಜಯ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತನ್ನ ಪತ್ನಿಗೆ ನೀಡಿದ ಕೊನೆಯ ಧ್ವನಿ ಸಂದೇಶದಲ್ಲಿ ಪೊಲೀಸರು ಬೇರೊಬ್ಬನ ಮೇಲೆ ಗುಂಡು ಹಾರಿಸಿದ್ದರೂ ಎಂದು ವಿಜಯ್ ಹೇಳಿದ್ದರು. ಆದರೆ ಗುಂಡು ಆಕಸ್ಮಿಕವಾಗಿ ನನಗೆ ತಗುಲಿದೆ. ಈ ಸುದ್ದಿಯ ನಂತರ ಕುಟುಂಬವು ಆಘಾತಕ್ಕೆ ಒಳಗಾಗಿದೆ.
ಘಟನೆಯ ಬಗ್ಗೆ ತಿಳಿದ ದುಮ್ರಿ ಶಾಸಕ ಜೈರಾಮ್ ಕುಮಾರ್ ಮಹಾತೋ ಅವರು ಭಾರತೀಯ ರಾಯಭಾರ ಕಚೇರಿ, ಸೌದಿ ಅರೇಬಿಯಾ ರಾಯಭಾರಿ, ಜಾರ್ಖಂಡ್ ರಾಜ್ಯಪಾಲರು ಮತ್ತು ಗಿರಿದಿಹ್ ಉಪ ಆಯುಕ್ತರಿಗೆ ಪತ್ರ ಬರೆದು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿದರು. ಮೃತರ ಶವವನ್ನು ತಕ್ಷಣ ಭಾರತಕ್ಕೆ ಹಿಂದಿರುಗಿಸುವಂತೆ ಮತ್ತು ಕುಟುಂಬಕ್ಕೆ ಕಾನೂನು ಮತ್ತು ಆರ್ಥಿಕ ನೆರವು ನೀಡುವಂತೆ ಅವರು ಮನವಿ ಮಾಡಿದರು.



