Home Crime ಫಲ್ಗುಣಿ ತೀರದ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸ್ ದಾಳಿ : 9 ಜಾನುವಾರುಗಳ ರಕ್ಷಣೆ :...

ಫಲ್ಗುಣಿ ತೀರದ ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸ್ ದಾಳಿ : 9 ಜಾನುವಾರುಗಳ ರಕ್ಷಣೆ : ಆರೋಪಿಗಳು ಎಸ್ಕೇಪ್…!

ಮಂಗಳೂರು : ಕಸಬಾ ಬೆಂಗ್ರೆ ಗ್ರಾಮದ ಫಲ್ಗುಣಿ ನದಿಯ ದಡದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಕಸಾಯಿಖಾನೆ ಮೇಲೆ ಪಣಂಬೂರು ಪೊಲೀಸರು ಬುಧವಾರ ಬೆಳಿಗ್ಗೆ ಮಿಂಚಿನ ದಾಳಿ ನಡೆಸಿದ್ದಾರೆ.

ನದಿ ತೀರದ ಶೆಡ್‌ವೊಂದರಲ್ಲಿ ಜಾನುವಾರುಗಳನ್ನು ಕಡಿದು ಮಾಂಸ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ವಧೆಗಾಗಿ ಕಟ್ಟಿಹಾಕಿದ್ದ 9 ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೃತ್ಯದ ಸ್ಥಳದಲ್ಲಿದ್ದ ಸುಮಾರು 205 ಕೆ.ಜಿ. ಮಾಂಸ ಹಾಗೂ ಜಾನುವಾರುಗಳನ್ನು ಕಡಿಯಲು ಬಳಸುತ್ತಿದ್ದ ಮಾರಕಾಸ್ತ್ರಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

​ಎಸಿಪಿ ಶ್ರೀಕಾಂತ್ ಹಾಗೂ ಪಿಐ ಸಲೀಂ ಅಬ್ಬಾಸ್ ಮಾರ್ಗದರ್ಶನದಲ್ಲಿ ಪಿಎಸ್ಐ ಶ್ರೀಕಲಾ ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದ್ದು, ಪೊಲೀಸರ ಆಗಮನದ ಸುಳಿವು ಸಿಗುತ್ತಿದ್ದಂತೆ ಆರೋಪಿಗಳಾದ ‘ಪೆತ್ತ ಕಬೀರ್’, ಬದ್ರುದ್ದೀನ್ ಹಾಗೂ ಇತರ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ತಪ್ಪಿಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಪಣಂಬೂರು ಠಾಣೆಯಲ್ಲಿ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.