Home Crime ಮೂಡುಬಿದಿರೆ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – ವಾಹನ ಚಾಲಕ ಸಾವು…!!

ಮೂಡುಬಿದಿರೆ: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ – ವಾಹನ ಚಾಲಕ ಸಾವು…!!

ಮೂಡುಬಿದಿರೆ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಸರಕು ಸಾಗಣೆ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ವಾಹನ ಚಾಲಕನೊಬ್ಬ ಮೃತಪಟ್ಟ ಘಟನೆ ಮೂಡುಬಿದಿರೆ ಸಮೀಪ ಬೆಳುವಾಯಿ ಫ್ಲೈಓವರ್ ಬಳಿ ನಡೆದಿದೆ.

ಮೃತರನ್ನು ಲೆಸ್ಟರ್ ಡೆವಿಡ್ ಡಿಸೋಜ ಎಂದು ಗುರುತಿಸಲಾಗಿದೆ. ಅವರು ಶ್ರೀ ಬಾಲಾಜಿ ಎಂಟರ್ ಪ್ರೈಸಸ್ ಸಂಸ್ಥೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.

ಅಕ್ಷಯ ಪಿ. ಶೆಟ್ಟಿ ಅವರ ಮಾಹಿತಿ ಪ್ರಕಾರ, ಲೆಸ್ಟರ್ ಡೆವಿಡ್ ಡಿಸೋಜ ಅವರಿಗೆ ಸ್ಫೋಟಕ ವಸ್ತುಗಳನ್ನು ಮೂಡುಬಿದಿರೆಯ ಸೈಟ್‌ಗೆ ವಿತರಣೆ ಮಾಡಲು ದಿನಾಂಕ 16-03-2026ರಂದು ಬೆಳಿಗ್ಗೆ ಕೆಎ-19-ಎಡಿ-4392 ಸಂಖ್ಯೆಯ ಅಶೋಕ್ ಲೈಲ್ಯಾಂಡ್ ದೊಸ್ತ್ ವಾಹನದಲ್ಲಿ ಕಳುಹಿಸಲಾಗಿತ್ತು.

ಮಧ್ಯಾಹ್ನ ಸುಮಾರು 3.30 ಗಂಟೆ ಸುಮಾರಿಗೆ ಮೂಡುಬಿದಿರೆ ಸಮೀಪದ ಬೆಳುವಾಯಿ ಫ್ಲೈಓವರ್ ಬಳಿ ಅಪಘಾತ ಸಂಭವಿಸಿದೆ. ಕೆಎ-31-ಎಫ್-1445 ಸಂಖ್ಯೆಯ ಕೆಎಸ್‌ಆರ್‌ಟಿಸಿ ಬಸ್ ಅನ್ನು ಚಾಲಕ ರಂಗನಾಥ ಕಾರ್ಕಳ ಕಡೆಗೆ ಚಲಾಯಿಸುತ್ತಿದ್ದು, ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಸಾಗುವ ಏಕಮುಖ ರಸ್ತೆಯಲ್ಲಿ ತಪ್ಪು ದಾರಿಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದು ಎದುರಿನಿಂದ ಬರುತ್ತಿದ್ದ ಲೈಲ್ಯಾಂಡ್ ದೊಸ್ತ್ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.

ಡಿಕ್ಕಿಯ ರಭಸಕ್ಕೆ ವಾಹನದ ಚಾಲಕ ಲೆಸ್ಟರ್ ಡೆವಿಡ್ ಡಿಸೋಜ ಅವರಿಗೆ ತಲೆಯು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.