ಮಂಗಳೂರು: ಭೂ ವ್ಯವಹಾರದ ಹಳೆಯ ಹಗೆತನದ ಹಿನ್ನೆಲೆ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳವಾರ (ಮಾ.17) ಮಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದಾರೆ.
ಗಾಯಗೊಂಡವರು ಮಲ್ಲಿಕಟ್ಟೆ ನಿವಾಸಿ ಮೋಹನ್ ದಾಸ್ ಶೆಟ್ಟಿ (56) ಎಂದು ಗುರುತಿಸಲಾಗಿದೆ. ಇವರಿಗೂ ಆರೋಪಿ ಮಹಮ್ಮದ್ ಶರೀಫ್ ಹಾಗೂ ಆತನ ತಂದೆ ಮಹಮ್ಮದ್ ಇಕ್ಬಾಲ್ ಅವರ ನಡುವೆ ಭೂ ವ್ಯವಹಾರದ ವಿಚಾರದಲ್ಲಿ ಭಿನ್ನಾಭಿಪ್ರಾಯವಿತ್ತು ಎನ್ನಲಾಗಿದೆ. ಸುರತ್ಕಲ್‌ನ ಕಾನ ಮತ್ತು ವಾಮಂಜೂರು ಪ್ರದೇಶಗಳಲ್ಲಿ ಭೂಮಿಗಾಗಿ ಆರೋಪಿಯು ಸುಮಾರು 2 ಕೋಟಿ ರೂ. ಹಣ ಹೂಡಿಕೆ ಮಾಡಿದ್ದನೆಂದು ತಿಳಿದುಬಂದಿದೆ.
ಈ ವ್ಯವಹಾರದಲ್ಲಿ ಮೋಹನ್ ದಾಸ್ ಶೆಟ್ಟಿ ಅವರು ತಮ್ಮನ್ನು ಮೋಸ ಮಾಡಿದ್ದಾರೆ ಎಂಬ ಆಕ್ರೋಶ ಶರೀಫ್‌ಗೆ ಇತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆ ಸುಮಾರಿಗೆ ನಗರದ ಆರ್ಯ ಸಮಾಜ ರಸ್ತೆಯ ಬಳಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆರೋಪಿ ಶರೀಫ್ ಮೋಹನ್ ದಾಸ್ ಅವರ ಮೊಬೈಲ್‌ನ್ನು ಕಸಿದುಕೊಂಡಿದ್ದಾನೆ ಎನ್ನಲಾಗಿದೆ.
ನಂತರ ಮೋಹನ್ ದಾಸ್ ಶೆಟ್ಟಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ, ಬೆನ್ನಟ್ಟಿಕೊಂಡು ಬಂದ ಆರೋಪಿ ಶರೀಫ್ ತನ್ನ ಇನೋವಾ ಕ್ರಿಸ್ಟಾ ಕಾರನ್ನು ಅತಿ ವೇಗದಲ್ಲಿ ಚಲಾಯಿಸಿ ಹಿಂಬದಿಯಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಮೋಹನ್ ದಾಸ್ ರಸ್ತೆಗೆ ಬಿದ್ದಿದ್ದು, ಕೊಲೆ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ದೂರಲಾಗಿದೆ.
ಈ ಸಂಬಂಧ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಮಹಮ್ಮದ್ ಶರೀಫ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



