ಕುಂದಾಪುರ ವಿಧಾನಸಭಾ ಕ್ಷೇತ್ರದ ಎರಡು ಬ್ಲಾಕ್‌ಗಳ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ, ಕೆಪಿಸಿಸಿ ವತಿಯಿಂದ ಕಾಂಗ್ರೆಸ್ ನಾಯಕರುಗಳಾದ ಮಾಜಿ ಸಭಾಪತಿ ಸುದರ್ಶನ್ ವಿ.ಆರ್ ಹಾಗೂ ವಿಧಾನಪರಿಷತ್ ಸದಸ್ಯ ಎಮ್. ನಾರಾಯಣಸ್ವಾಮಿ ಅವರು ವೀಕ್ಷಕರಾಗಿ ಆಗಮಿಸಿ ಸ್ಥಳೀಯ ಕಾಂಗ್ರೆಸ್ ಜನಪ್ರತಿನಿಧಿಗಳು, ರಾಜ್ಯ, ಜಿಲ್ಲಾ, ಕ್ಷೇತ್ರ ಮಟ್ಟದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಸಭೆಯಲ್ಲಿ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಸ್ಥಗಿತಗೊಂಡಿರುವ ಕುರಿತು ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಂಘಟನೆಗೆ ಪ್ರಾಮುಖ್ಯತೆ ನೀಡುವ, ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಿರುವ ನಾಯಕರಿಗೆ ಪಕ್ಷದ ನಾಯಕತ್ವ ನೀಡಬೇಕು ಎಂಬ ಬಲವಾದ ಅಭಿಪ್ರಾಯವೂ ವ್ಯಕ್ತವಾಯಿತು.
ಕಾಂಗ್ರೆಸ್‌ನಲ್ಲಿ ಸುಮಾರು 18ಕ್ಕೂ ಹೆಚ್ಚು ಘಟಕಗಳು ಇದ್ದರೂ, ಅವುಗಳಲ್ಲಿ ಬಹುತೇಕ ಘಟಕಗಳು ಸಕ್ರಿಯವಾಗಿಲ್ಲ ಎಂಬ ಗಂಭೀರ ವಿಚಾರವನ್ನು ವೀಕ್ಷಕರ ಗಮನಕ್ಕೆ ತರಲಾಯಿತು.
ಕೆಪಿಸಿಸಿಗೆ ಪಟ್ಟಿ ಸಲ್ಲಿಸುವ ಉದ್ದೇಶಕ್ಕಾಗಿ ಮಾತ್ರ ಘಟಕಗಳ ಹೆಸರನ್ನು ಸೇರಿಸಲಾಗುತ್ತಿದೆ; ಆದರೆ ಆ ಪಟ್ಟಿಯಲ್ಲಿ ಹೆಸರು ಇರುವ ಮತ್ತು BLA ಪಟ್ಟಿಯಲ್ಲಿ ಇರುವ ಬಹುತೇಕರಿಗೆ ತಾವು ಪದಾಧಿಕಾರಿಗಳಾಗಿದ್ದೇವೆ ಎಂಬುದೇ ತಿಳಿದಿಲ್ಲ ಎಂಬ ಅಂಶವೂ ಹೊರಬಂದಿದೆ.

ಇದೇ ವೇಳೆ, ಕೆಲವು ನಾಯಕರು ತಮ್ಮ ವೈಯಕ್ತಿಕ ವ್ಯವಹಾರಗಳ ರಕ್ಷಣೆಗಾಗಿ ಮಾತ್ರ ಪಕ್ಷದ ಹುದ್ದೆಗಳನ್ನು ಲಾಭಿ ಮಾಡಿಕೊಂಡು ಪಡೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇಂತಹವರು ಕಾಂಗ್ರೆಸ್ ವಿರೋಧಿ ಚಿಂತನೆಯವರಿಂದ “ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ” ಎಂಬ ಬಿರುದನ್ನು ಪಡೆದವರಾಗಿದ್ದಾರೆ ಎಂಬ ಆತಂಕಕಾರಿ ವಿಚಾರವನ್ನೂ ಕಾರ್ಯಕರ್ತರು ವೀಕ್ಷಕರಿಗೆ ವಿವರಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಈ ಪಕ್ಷ ವಿರೋಧಿ ರಾಜಕಾರಣದ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದ ವೀಕ್ಷಕರು, ಈ ಎಲ್ಲಾ ವಿಷಯಗಳನ್ನು ಪಕ್ಷದ ಉನ್ನತ ನಾಯಕತ್ವದ ಗಮನಕ್ಕೆ ತರಲಾಗುವುದು ಹಾಗೂ ಕ್ಷೇತ್ರಕ್ಕೆ ಸೂಕ್ತ ನಾಯಕತ್ವ ಒದಗಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.



