ಉಡುಪಿ, ಮಾ.13: ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿಯಿಂದ ಅಡುಗೆ ಅನಿಲ ಕೊರತೆ ಉಂಟಾಗುತ್ತದೆ ಎಂಬ ಆತಂಕಕ್ಕೆ ಜಿಲ್ಲೆಯಲ್ಲಿ ಯಾವುದೇ ಕಾರಣವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದ್ದಾರೆ.
ಮಣಿಪಾಲದ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗ್ಯಾಸ್ ಏಜೆನ್ಸಿ ಮಾಲಕರೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಗ್ರಾಹಕರು ಅನಗತ್ಯವಾಗಿ ಹೆಚ್ಚಿನ ಬುಕ್ಕಿಂಗ್ ಮಾಡಬಾರದು ಎಂದು ಮನವಿ ಮಾಡಿದರು.
ಏಕ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ ಆದ್ಯತೆ ನೀಡುವಂತೆ ಸೂಚಿಸಿದ ಅವರು, ಗ್ಯಾಸ್ ಕೊರತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದರು. ಸಮಸ್ಯೆಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 112 ಅನ್ನು ಸಂಪರ್ಕಿಸಲು ತಿಳಿಸಿದರು.


