Home Latest ಉಡುಪಿ: ಖಾಸಗಿ ಬಸ್‌ನ ಪುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ…!!

ಉಡುಪಿ: ಖಾಸಗಿ ಬಸ್‌ನ ಪುಟ್‌ಬೋರ್ಡ್‌ನಲ್ಲಿ ವಿದ್ಯಾರ್ಥಿಗಳ ಅಪಾಯಕಾರಿ ಪ್ರಯಾಣ…!!

ಉಡುಪಿ : ಉಡುಪಿ, ಅಜೆಕಾರು ಮಾರ್ಗದಲ್ಲಿ ಸಂಚರಿಸುತ್ತಿರುವ ‘ಭಾರತಿ’ ಹೆಸರಿನ ಖಾಸಗಿ ಬಸ್‌ನಲ್ಲಿ ವಿದ್ಯಾರ್ಥಿಗಳು ಪುಟ್‌ಬೋರ್ಡ್‌ನಲ್ಲಿ ನಿಂತುಕೊಂಡೇ ಪ್ರಯಾಣಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.

ಚಲಿಸುತ್ತಿದ್ದ ಬಸ್‌ನ ಹಿಂಭಾಗದ ಬಾಗಿಲಿನ ಬಳಿ ವಿದ್ಯಾರ್ಥಿಗಳು ಹೊರಗಡೆ ತೂಗಿಕೊಂಡು ಪ್ರಯಾಣಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಭಾರೀ ಅನಾಹುತಕ್ಕೆ ಆಹ್ವಾನ ನೀಡುವಂತಾಗಿದೆ.

ಪ್ರತಿದಿನ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ಗಳಲ್ಲಿ ಗಿರಾಕಿ ಹೆಚ್ಚಿರುವ ಕಾರಣದಿಂದ ಪುಟ್‌ಬೋರ್ಡ್‌ನಲ್ಲಿ ನಿಂತುಕೊಂಡೇ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಚಲಿಸುತ್ತಿರುವ ವಾಹನದಲ್ಲಿ ಇಂತಹ ರೀತಿಯ ಪ್ರಯಾಣವು ಕೇವಲ ನಿಯಮ ಉಲ್ಲಂಘನೆ ಮಾತ್ರವಲ್ಲ, ಪ್ರಾಣಾಪಾಯಕರವೂ ಹೌದು. ಸಣ್ಣ ಅಜಾಗರೂಕತೆಯೇ ಜೀವಹಾನಿಗೆ ಕಾರಣವಾಗಬಹುದಾದ ಅಪಾಯ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಪ್ರಯಾಣಿಕರ ಸುರಕ್ಷತೆ ಖಚಿತಪಡಿಸುವ ಹೊಣೆ ಯಾರದು? ಖಾಸಗಿ ಬಸ್‌ಗಳಲ್ಲಿ ನಿಯಮಿತ ತಪಾಸಣೆ ನಡೆಯುತ್ತಿದೆಯೇ? ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಪಟ್ಟಂತೆ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ತಜ್ಞರ ಅಭಿಪ್ರಾಯದಂತೆ, ಪುಟ್‌ಬೋರ್ಡ್‌ನಲ್ಲಿ ನಿಂತುಕೊಂಡು ಪ್ರಯಾಣಿಸುವುದು ಅಪಘಾತದ ಸಾಧ್ಯತೆಯನ್ನು ಬಹಳಷ್ಟು ಹೆಚ್ಚಿಸುತ್ತದೆ. ರಸ್ತೆಯ ತಿರುವುಗಳು, ಹಠಾತ್ ಬ್ರೇಕ್, ಅಥವಾ ಇತರ ವಾಹನಗಳ ಅಡ್ಡಿ ಇತ್ಯಾದಿ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಕೆಳಗೆ ಬಿದ್ದು ಗಂಭೀರ ಗಾಯಗೊಳ್ಳುವ ಸಾಧ್ಯತೆ ಇದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚತ್ತುಕೊಂಡು ಖಾಸಗಿ ಬಸ್‌ಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು.

ಶಾಲೆ-ಕಾಲೇಜು ಸಮಯಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸುವುದು, ನಿಯಮ ಉಲ್ಲಂಘಿಸುವ ಚಾಲಕರು ಮತ್ತು ಮಾಲೀಕರ ಮೇಲೆ ದಂಡಾತ್ಮಕ ಕ್ರಮ ಕೈಗೊಳ್ಳುವುದು ಹಾಗೂ ನಿಯಮಿತ ತಪಾಸಣೆ ನಡೆಸುವುದು ಅವಶ್ಯಕವಾಗಿದೆ. ಒಂದು ಸಣ್ಣ ನಿರ್ಲಕ್ಷ್ಯವೇ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳ ಜೀವದ ಪ್ರಶ್ನೆಯಲ್ಲಿ ಯಾವುದೇ ರಾಜಿ ಇರಬಾರದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.