ಉಡುಪಿ: ಇತ್ತೀಚೆಗೆ ನಕಲಿ ಅಂಕಪಟ್ಟಿಯ ಜಾಲ ಎಲ್ಲೆಡೆ ಹೆಚ್ಚುತ್ತಲೇ ಇದೆ. ಬೆರಳೆಣಿಕೆಯಷ್ಟು ಮಾತ್ರ ನಕಲಿ ಅಂಕಪಟ್ಟಿ ದಂಧೆ ಬೆಳಕಿಗೆ ಬರುತ್ತಿದೆ. 2025ರ ನೀಟ್ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ರಾಜ್ಯದ ಹಲವು ವಿದ್ಯಾರ್ಥಿಗಳು 200 ರ್ಯಾಂಕ್ ನೊಳಗೆ ಸಾಧನೆ ಮಾಡಿದ್ದರು. ಉಡುಪಿ ಕಾಲೇಜಿನ ವಿದ್ಯಾರ್ಥಿಯೋರ್ವ ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ಹಾಗೂ ರಾಜ್ಯಕ್ಕೆ 8ನೇ ಸ್ಥಾನ ಪಡೆದಿದ್ದರು. ಇದೀಗ ಈ ಪರೀಕ್ಷೆಯಲ್ಲಿಯೂ ಕೂಡ ನಕಲಿ ಅಂಕಪಟ್ಟಿ ತಯಾರಿಸಿ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಗೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಯ ಕುರಿತು ಇತರ ವಿದ್ಯಾರ್ಥಿಗಳಿಗೆ ಸಂಶಯ ಉಂಟಾಗಿ ಅದನ್ನು ಪರಿಶೀಲಿಸಿದಾಗ ನಕಲಿ ಅಂಕಪಟ್ಟಿಯ ಜಾಲದ ಕುರಿತು ಬೆಳಕಿಗೆ ಬಂದಿದೆ. ಅಸಲಿಗೆ ಆತನಿಗೆ 17 ಲಕ್ಷ ಸರಣಿಯ ರ್ಯಾಂಕ್ ಎನ್ನುವುದು ತಿಳಿದುಬಂದಿದೆ. ಆ ವಿದ್ಯಾರ್ಥಿಯ ಅಸಲಿ ಅಂಕಪಟ್ಟಿಯಲ್ಲಿ 65 ಅಂಕ ಎಂದಿದ್ದು, ನಕಲಿ ಪಟ್ಟಿಯಲ್ಲಿ 646 ಎಂದಿದೆ. ನಕಲಿ ಸರ್ಟಿಫಿಕೇಟ್‌ನ ಫಾಂಟ್ ಗಳು ಕೂಡ ಸಂಪೂರ್ಣವಾಗಿ ಅದಲು ಬದಲಾಗಿದ್ದು, ಎರಡೂ ಅಂಕಪಟ್ಟಿಯನ್ನು ತಾಳೆ ಹಾಕಿ ನೋಡಿದಾಗ ನಕಲಿ ಎಂಬುದು ಅರಿವಿಗೆ ಬಂದಿದೆ. ಅಷ್ಟೇ ಅಲ್ಲದೇ ಪರೀಕ್ಷಾ ನಿರ್ದೇಶಕರ ಸಹಿಯ ಬದಲಾಗಿ ಹಿರಿಯ ನಿರ್ದೇಶಕರ ಸಹಿ ಹಾಕಲಾಗಿದೆ. ಮೂಲ ಅಂಕಪಟ್ಟಿಯಲ್ಲಿ ಎರಡು ಪುಟಗಳಿದ್ದರೆ ನಕಲಿಯಲ್ಲಿ ಒಂದೇ ಪುಟ ಇದೆ. ಅಭ್ಯರ್ಥಿಯ ಭಾವಚಿತ್ರದಲ್ಲೂ ಕೂಡ ವ್ಯತ್ಯಾಸವಿದ್ದು, ಕಟ್ ಆಫ್ ಸ್ಕೋರ್ ಹಾಗೂ ಒಟ್ಟು ಅಭ್ಯರ್ಥಿಗಳ ಸಂಖ್ಯೆಯಲ್ಲೂ ಸಾಕಷ್ಟು ಬದಲಾವಣೆಗಳಾಗಿದ್ದು, ಕೇಂದ್ರ ಸರ್ಕಾರದ ಲೋಗೋದಲ್ಲಿ ಡಿಪಾರ್ಟ್‌ಮೆಂಟ್ ಆಫ್ ಹೈಯರ್ ಎಜುಕೇಶನ್ ಎಂಬುದುರ ಬದಲು ಬರೀ ಮಿನಿಸ್ಟ್ರಿ ಆಫ್ ಎಜುಕೇಶನ್ ಎನ್ನಲಾಗಿದೆ.
ನೀಟ್‌ನಲ್ಲಿ ಒಬ್ಬರಿಗೆ ಒಂದೇ ರ್ಯಾಂಕ್ ನೀಡಲಾಗುತ್ತದೆ. ನಕಲಿ ಅಂಕಪಟ್ಟಿ ಪಡೆದ ವಿದ್ಯಾರ್ಥಿ ದೇಶಕ್ಕೆ 107ನೇ ರ್ಯಾಂಕ್ ಪಡೆದಿರುವುದಾಗಿ ತಿಳಿಸಿದ್ದು, ಅಸಲಿಗೆ ಹೊಸದಿಲ್ಲಿ ಮೂಲದ ವಿದ್ಯಾರ್ಥಿನಿಯೊಬ್ಬರೂ ಅದೇ ರ್ಯಾಂಕ್ ಅನ್ನು ಪಡೆದಿದ್ದಾರೆ. ಅಸಲಿ ಅಂಕಪಟ್ಟಿ ಮುದ್ರಾಂಕ ದಿನಾಂಕ ನಮೂದಾಗಿದ್ದು, ನಕಲಿ ಅಂಕಪಟ್ಟಿಯಲ್ಲಿ ಅದು ನಮೂದಾಗಿಲ್ಲ. ಇನ್ನು, ಈ ರೀತಿ ನಕಲಿ ಅಂಕಪಟ್ಟಿ ಜಾಲದಿಂದಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮೋಸ ಆಗುತ್ತದೆ. ಈ ದಂಧೆಯ ಕುರಿತು ಸಮಗ್ರ ತನಿಖೆ ಆಗಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಡಳಿತ, ರಾಜ್ಯ ಸರ್ಕಾರ, ಜಿಲ್ಲಾ ಪೊಲೀಸ್ ಹಾಗೂ ನೀಟ್ ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಗಭೀರವಾಗಿ ಪರಿಗಣಿಸಿ ನಕಲಿ ಅಂಕಪಟ್ಟಿಯ ಜಾಲವನ್ನು ಬೇಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.