ಉಪ್ಪಿನಂಗಡಿ: ಇಲ್ಲಿನ ಕುಮಾರಧಾರಾ ನದಿಯ 34 ನೆಕ್ಕಿಲಾಡಿ ಸಮೀಪ ದಡದಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ಮೊಸಳೆಯನ್ನು ನೋಡಲು ಜನ ಜಮಾಯಿಸುತ್ತಿದ್ದಂತೆ ಮೊಸಳೆಯು ಬಾಯನ್ನು ಅಗಲಿಸಿ ಆಕ್ರಮಣಕಾರಿ ವರ್ತನೆ ತೋರಿ ನದಿ ನೀರಿಗೆ ಇಳಿದು ಹೋದ ಘಟನೆ ಬುಧವಾರ ಸಾಯಂಕಾಲ ನಡೆದಿದೆ.
ಇಲ್ಲಿನ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರಾ ನದಿ ದಡದಲ್ಲಿ ಮೊಸಳೆಯೊಂದು ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ಇದನ್ನು ತಿಳಿದು ಸ್ಥಳೀಯರು ಹತ್ತಿರಕ್ಕೆ ಹೋದಾಗ ಮೊಸಳೆಯು ಬಾಯಿ ಅಗಲಿಸಿ ಆಕ್ರಮಣಕಾರಿಯಾಗಿ ವರ್ತಿಸಿ ಮತ್ತೆ ನದಿ ನೀರಿಗೆ ಇಳಿದು ಕಣ್ಮರೆಯಾಗಿದೆ.
ಎರಡು ವರ್ಷಗಳ ಹಿಂದೆ ಪಂಜಳದ ನೇತ್ರಾವತಿ ನದಿಯಲ್ಲಿಯೂ ದೊಡ್ಡ ಮೊಸಳೆಗಳೆರಡು ಪ್ರತ್ಯಕ್ಷವಾಗಿದ್ದವು. ಕಳೆದ ವರ್ಷ ಇಲ್ಲಿನ ನೇತ್ರಾವತಿ ನದಿ ದಡದಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಮೊಸಳೆ ಇರುವ ಕಾರಣ ನದಿಗೆ ಮೀನು ಬೇಟೆಗೆಂದು ಹೋಗುವವರಲ್ಲಿ ಆತಂಕ ಮೂಡಿಸಿದೆ. ಕೆಲವು ದಿನಗಳ ಹಿಂದೆ ನದಿಯಲ್ಲಿ ನೀರು ಕಡಿಮೆ ಇದ್ದಾಗ ನೇತ್ರಾವತಿ ನದಿಯಲ್ಲಿ ಕಡವಿನ ಬಾಗಿಲ ಸಮೀಪ ಸುಮಾರು 10ರಷ್ಟಿದ್ದ ನೀರು ನಾಯಿ ಗಳ ಹಿಂಡು ಕಾಣಿಸಿಕೊಂಡಿತ್ತು ಎಂದು ಉಪ್ಪಿನಂಗಡಿಯ ಪ್ರವಾಹ ರಕ್ಷಣ ತಂಡದ ಗೃಹ ರಕ್ಷಕದಳದ ಸಿಬಂದಿ ದಿನೇಶ್ ಬಿ. ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ನದಿಗೆ ಮೀನಿನ ಮರಿಗಳನ್ನು ಹಾಕಲಾಗಿದ್ದು, ಅವುಗಳು ಈಗ ಬೆಳೆದು ದೊಡ್ಡದಾಗಿವೆ. ಮೀನು ಹೇರಳವಾಗಿರುವ ಕಾರಣ ಇದೀಗ ನೀರು ನಾಯಿಗಳು ಅದರ ಬೇಟೆಗಾಗಿ ನದಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಎನ್ನಲಾಗುತ್ತಿದೆ.