ಉಡುಪಿ, ಮಾ. 9: ಉಡುಪಿಯ ತೆಂಕಪೇಟೆಯ ನಿವಾಸಿ ಪುಷ್ಪ ಭಟ್ (74) ಎಂಬ ವೃದ್ಧೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಕೆ.ಎಂ. ಸುರೇಶ್ ಭಟ್ (72) ಅವರ ಅಕ್ಕರಾದ ಪುಷ್ಪ ಭಟ್ ಅವರ ಪತಿ ಐದು ವರ್ಷಗಳ ಹಿಂದೆ ಹಾಗೂ ಪುತ್ರ ಎಂಟು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದರಿಂದ ಅವರು ಕಳೆದ ಸುಮಾರು 14 ವರ್ಷಗಳಿಂದ ತಮ್ಮ ಸಹೋದರ ಸುರೇಶ್ ಭಟ್ ಅವರ ಜೊತೆಯಲ್ಲಿ ವಾಸವಾಗಿದ್ದರು.
ಕಳೆದ 15 ದಿನಗಳಿಂದ ಪುಷ್ಪ ಭಟ್ ಅವರು ಮಾನಸಿಕವಾಗಿ ಮನನೊಂದು ಇದ್ದಂತೆ ಸಹೋದರರೊಂದಿಗೆ ಮಾತನಾಡುತ್ತಿದ್ದರೆಂದು ತಿಳಿದುಬಂದಿದೆ. ದಿನಾಂಕ 08-03-2026 ರಂದು ಬೆಳಿಗ್ಗೆ ಸುಮಾರು 11:45ರ ವೇಳೆ ಪಿರ್ಯಾದಿದಾರರ ಹೆಂಡತಿಯ ತಮ್ಮ ವರದರಾಜ್ ಅವರೊಂದಿಗೆ ಅವರು ಮಾತುಕತೆ ನಡೆಸಿದ್ದರು. ಬಳಿಕ ಸ್ವಲ್ಪ ಹೊತ್ತಿನ ನಂತರ ಮನೆಯ ಹೊರಗೆ ಬಂದು ಅಕ್ಕನನ್ನು ಕರೆದಾಗ ಅವರು ಎಲ್ಲಿಯೂ ಕಾಣಿಸದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಮನೆಯ ಹಿಂದಿನ ಬಾವಿಯಲ್ಲಿ ಪುಷ್ಪ ಭಟ್ ಅವರು ಕೌಚಿ ಬಿದ್ದ ಸ್ಥಿತಿಯಲ್ಲಿ ತೇಲುತ್ತಿರುವುದು ಕಂಡುಬಂದಿದೆ.
ತಕ್ಷಣವೇ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬಾವಿಯಿಂದ ಪುಷ್ಪ ಭಟ್ ಅವರ ದೇಹವನ್ನು ಮೇಲೆತ್ತಿದರು. ಬಳಿಕ ಅವರನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದೊಯ್ಯಲಾಗಿ, ವೈದ್ಯರು ಸಂಜೆ ಸುಮಾರು 3:30ರ ವೇಳೆಗೆ ಅವರು ಮೃತರಾಗಿರುವುದಾಗಿ ತಿಳಿಸಿದರು.
ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಜೀವನದ ಬಗ್ಗೆ ಜಿಗುಪ್ಸೆಗೊಂಡು ಪುಷ್ಪ ಭಟ್ ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.



