ಮಂಗಳೂರು: ಹಲವು ವರ್ಷಗಳಿಂದ ನ್ಯಾಯಾಲಯದ ಕಣ್ಣು ತಪ್ಪಿಸಿ, ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ವಾರೆಂಟ್ ಆರೋಪಿಗಳನ್ನು ಮಂಗಳೂರು ಪೊಲೀಸರು ಅಂತಿಮವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಕಾಸರಗೂಡು ಜಿಲ್ಲೆಯ ತೆಕ್ಕಿಲ್ ನಿವಾಸಿ ಮೊಹಮ್ಮದ್ ರಫೀಕ್ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಂಟಲ್ಪಾಡಿ, ಎರ್ಲಂಪಾಡಿ ನಿವಾಸಿ ಪ್ರಸಾದ್ (33) ಎಂದು ಗುರುತಿಸಲಾಗಿದೆ.
ಬಂಧಿತರ ಪೈಕಿ ಮೊಹಮ್ಮದ್ ರಫೀಕ್ ವಿರುದ್ಧ ಈ ಹಿಂದೆ ಮಂಗಳೂರಿನ ಇ & ಎನ್ (E&N) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅ. ಕ್ರ. 03/2021 ರಡಿ 8(C), 20(b) (ii)(B) NDPS (ಮಾದಕ ದ್ರವ್ಯ ನಿರೋಧಕ) ಕಾಯ್ದೆಯಡಿಯ ಗಂಭೀರ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ ಎನ್ನಲಾಗಿದೆ. ಈ ಪ್ರಕರಣದ ಬಳಿಕ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಲಯವು ಈತನ ವಿರುದ್ಧ ವಾರೆಂಟ್ ಹೊರಡಿಸಿತ್ತು.
ಕಾರ್ಯಪ್ರವೃತ್ತರಾದ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜೂನ್ 24 ರಂದು ನಿಖರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ, ತಲೆಮರೆಸಿಕೊಂಡಿದ್ದ ಆರೋಪಿ ಮೊಹಮ್ಮದ್ ರಫೀಕ್‌ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸದ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಮತ್ತೊಬ್ಬ ಆರೋಪಿ ಪ್ರಸಾದ್‌ನನ್ನೂ ಕೂಡ ಪೊಲೀಸರು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ.
ದೀರ್ಘಕಾಲದಿಂದ ಕಾನೂನಿನ ಕೈಯಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿಗಳ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.




