Home Crime ಅರಣ್ಯಾಧಿಕಾರಿ ಮನೆಗೆ ಕಳ್ಳರ ದಾಳಿ – 181 ಗ್ರಾಂ ಚಿನ್ನ, ಲಕ್ಷಾಂತರ ನಗದು ಕಳವು..!

ಅರಣ್ಯಾಧಿಕಾರಿ ಮನೆಗೆ ಕಳ್ಳರ ದಾಳಿ – 181 ಗ್ರಾಂ ಚಿನ್ನ, ಲಕ್ಷಾಂತರ ನಗದು ಕಳವು..!

ಉಳ್ಳಾಲ: ಅರಣ್ಯಾಧಿಕಾರಿಯೊಬ್ಬರು ವಾಸವಾಗಿದ್ದ ಬಾಡಿಗೆ ಮನೆಗೆ ನುಗ್ಗಿದ ಕಳ್ಳರು ಬೈಕ್ ಸೇರಿದಂತೆ 181 ಗ್ರಾಂ ಚಿನ್ನ, ಬೆಳ್ಳಿಯ ಆಭರಣಗಳು ಹಾಗೂ ಸುಮಾರು ಹತ್ತೂವರೆ ಲಕ್ಷ ರೂಪಾಯಿ ನಗದು ದೋಚಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪಿಕಾಡು ಅಂಬಿಕಾ ರೋಡ್‌ನಲ್ಲಿ ನಡೆದಿದೆ.

ಕೋಟೆಕಾರು ಉಪ ವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಗುಡಿಹೊಲ ಅವರು ವಾಸವಾಗಿದ್ದ ಅಂಬಿಕಾ ರೋಡ್, ಕಾಪಿಕಾಡಿನ ಬಾಡಿಗೆ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮೆಹಬೂಬ್ ಸಾಬ್ ಅವರು ಪತ್ನಿ ಹಾಗೂ ಮಗುವಿನೊಂದಿಗೆ ಕಳೆದ ಆರು ತಿಂಗಳುಗಳಿಂದ ಇಲ್ಲಿ ವಾಸವಾಗಿದ್ದರು.

ಕಳೆದ ಶುಕ್ರವಾರ ಅವರು ಕುಟುಂಬ ಸಮೇತ ತಮ್ಮ ಮೂಲ ಊರಾದ ಕೊಪ್ಪಳಕ್ಕೆ ತೆರಳಿದ್ದರು. ಇಂದು ಬೆಳಿಗ್ಗೆ ಊರಿಂದ ಮನೆಗೆ ಮರಳಿದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ಮನೆಯೊಳಗೆ ನುಗ್ಗಿದ ಕಳ್ಳರು ಹಾಲ್ ಹಾಗೂ ಎರಡು ಕೋಣೆಗಳಲ್ಲಿದ್ದ ಕಪಾಟುಗಳನ್ನು ಜಾಲಾಡಿ, ಲಾಕರ್‌ಗಳಲ್ಲಿ ಇರಿಸಿದ್ದ 181 ಗ್ರಾಂ ಚಿನ್ನ, ಮಗುವಿನ ಬೆಳ್ಳಿಯ ಆಭರಣಗಳು ಹಾಗೂ ಬ್ಯಾಂಕಿನಿಂದ ಸಾಲವಾಗಿ ಪಡೆದಿದ್ದ ಸುಮಾರು ₹10.5 ಲಕ್ಷ ನಗದನ್ನು ದೋಚಿದ್ದಾರೆ.

ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.