ಮಂಗಳೂರು: ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಂಗಳೂರಿನ ಮೊಹಮ್ಮದ್ ಸಯ್ಯದ್ ಆಫ್ರೀದಿ (26), ಮಕ್ಸೂದ್ ಸಾಗ್ (23), ಅಹಮ್ಮದ್ ಅಲಿ ಅರ್ಷಾನ್ (22), ಎಡಲ್ ರೋಚ್ (33), ಆರೋನ್ ವಿಶಾಲ್ ಲಸ್ರಾದೋ (18) ಹಾಗೂ ಕೇರಳ ಮೂಲದ ಫೆಲಿಕ್ಸ್ ಪಿ. ಜೋಸೆಫ್ (20) ಎಂದು ಗುರುತಿಸಲಾಗಿದೆ.
ಮಂಗಳೂರು ದಕ್ಷಿಣ ಹಾಗೂ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ದಾಳಿಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎ (MDMA) ಹಾಗೂ ಹೈಡ್ರೋ ವೀಡ್ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಲಾಸಿಕ್ ಕಂಫರ್ಟ್ ಲಾಡ್ಜ್‌ನಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೊಹಮ್ಮದ್ ಸಯ್ಯದ್ ಆಫ್ರೀದಿ, ಮಕ್ಸೂದ್ ಸಾಗ್, ಅಹಮ್ಮದ್ ಅಲಿ ಅರ್ಷಾನ್ ಹಾಗೂ ಫೆಲಿಕ್ಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಂದ 53.87 ಗ್ರಾಂ ಎಂಡಿಎಂಎ, 103.20 ಗ್ರಾಂ ಹೈಡ್ರೋ ವೀಡ್ ಗಾಂಜಾ ಹಾಗೂ ಎಂಜಿ ಹೆಕ್ಟರ್ ಕಾರನ್ನು ಜಪ್ತಿ ಮಾಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಉತ್ತರ ಠಾಣಾ ಪೊಲೀಸರು ಬಂದರ್‌ನ ಗ್ರೀನ್ ಪಾರ್ಕ್ ಮೈದಾನದ ಬಳಿ ದಾಳಿ ನಡೆಸಿ ಎಡಲ್ ರೋಚ್ ಹಾಗೂ ಆರೋನ್ ವಿಶಾಲ್ ಲಸ್ರಾದೋ ಅವರನ್ನು ಬಂಧಿಸಿದ್ದಾರೆ. ಅವರಿಂದ ಸುಮಾರು 1 ಕೆಜಿಗೂ ಅಧಿಕ ಗಾಂಜಾ ಹಾಗೂ ಮಾರುತಿ ಸ್ವಿಫ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ತನಿಖೆಯ ವೇಳೆ ಈ ಡ್ರಗ್ಸ್ ಜಾಲದ ಅಂತರರಾಜ್ಯ ಸಂಪರ್ಕವೂ ಬೆಳಕಿಗೆ ಬಂದಿದೆ. ಮುಂಬೈ ಮೂಲದ ಸಂದೀಪ್ ಶೆಟ್ಟಿ ಎಂಬಾತ ಹೈಡ್ರೋ ವೀಡ್ ಗಾಂಜಾವನ್ನು ವಿಮಾನದ ಮೂಲಕ ಬೆಂಗಳೂರಿಗೆ ಸಾಗಿಸುತ್ತಿದ್ದ ಎನ್ನಲಾಗಿದೆ. ಅಲ್ಲಿಂದ ಮಂಗಳೂರಿಗೆ ತಲುಪಿಸಲು ಎಡಲ್ ರೋಚ್‌ನನ್ನು ಬಳಸಿಕೊಳ್ಳಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಈ ಜಾಲವು ವ್ಯವಸ್ಥಿತವಾಗಿ ಬೆಂಗಳೂರಿನಿಂದ ಮಾದಕ ವಸ್ತುಗಳನ್ನು ತರಿಸಿ ಮಂಗಳೂರಿನ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.



