ಕುಂದಾಪುರ: ಆರು ತಿಂಗಳ ಹಿಂದೆ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಮೇಲಿನ ದೋಷಾರೋಪಣೆಗಳು ಸಾಬೀತಾಗಿದ್ದು, ಆತ ಅಪರಾಧಿಯೆಂದು ಕುಂದಾಪುರದ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಟಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಬಿ. ತೀರ್ಪು ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಕಾರ್ಕಳ ಮೂಲದ ಉಮಾನಾಥ ಪ್ರಭು (59) ಅಪರಾಧಿಯಾಗಿದ್ದು, ಪ್ರಸ್ತುತ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಈ ಕಳವು ಪ್ರಕರಣದಲ್ಲಿ 1 ವರ್ಷ 6 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಲಾಗಿದೆ.
2025ರ ಮೇ ತಿಂಗಳಿನಲ್ಲಿ ಕೊಲ್ಲೂರು ಠಾಣಾ ವ್ಯಾಪ್ತಿಯ ಇಡೂರು-ಕುಂಜ್ಞಾಡಿ ಗ್ರಾಮದ ಜನತಾ ಕಾಲನಿಯ ಮನೆಯೊಂದರಲ್ಲಿ ರಾತ್ರಿ ಯಾರೂ ಇಲ್ಲದ ವೇಳೆ ಎರಡು ಚಿನ್ನದ ಬಳೆಗಳ ಕಳ್ಳತನ ನಡೆದಿದ್ದು, ಬೆಳಿಗ್ಗೆ ಘಟನೆ ಬೆಳಕಿಗೆ ಬಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಜಾಡು ಹಿಡಿದ ಪೊಲೀಸರು ಜೂ.17ರಂದು ಅಜೆಕಾರು ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದರು.
ಅಭಿಯೋಜನೆ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಉದಯ್ ಕುಮಾರ್ ವಾದಿಸಿದ್ದರು. ಆರೋಪಿಯು ರೂಢಿಗತವಾಗಿ ಕಳ್ಳತನ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದು, ಆತನಿಗೆ ಬಿ.ಎನ್.ಎಸ್ ಕಾಯ್ದೆಯಡಿ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಸಹಾಯಕ ಸರಕಾರಿ ಅಭಿಯೋಜಕರು ಮನವಿ ಮಾಡಿದ್ದರು.
ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಒಟ್ಟು 20 ಸಾಕ್ಷಿಗಳ ವಿಚಾರಣೆ ನಡೆಸಲಾಗಿತ್ತು. ಕಾನೂನು ಸುವ್ಯವಸ್ಥೆ ಪಿಎಸ್‌ಐ ವಿನಯ್ ಎಂ. ಕೊರ್ಲಹಳ್ಳಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.



