ಉಡುಪಿ: ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಗುರುಗಳಾದ ಅಭಿನವ ಋಷ್ಯಶೃಂಗ, ಅಕ್ಷರಕೋಟಿ ಕೃಷ್ಣಮಂತ್ರೋಪಾಸಕ, ಯತಿಕುಲ ಚಕ್ರವರ್ತಿ, ತಪಶ್ಚಕ್ರವರ್ತಿ ಮೊದಲಾದ ಅನೇಕ ಬಿರುದಾಂಕಿತ ಶತಾಯುಷಿ ಅನಂತಶ್ರೀ ವಿಭೂಷಿತ ಶ್ರೀ ಸುಧೀಂದ್ರ ತೀರ್ಥ ಮಹಾಸ್ವಾಮಿಗಳು ಅವರ ಆರಾಧನಾ ಮಹೋತ್ಸವದ ಪ್ರಯುಕ್ತ ಶ್ರೀ ಕೃಷ್ಣ ಮಠದ ಸಮುಚ್ಚಯದಲ್ಲಿರುವ ಅವರ ವೃಂದಾವನದಲ್ಲಿ ವಿಶೇಷ ಪೂಜೆಗಳು ಮಾರ್ಚ್ 04ರಂದು ನೆರವೇರಿದವು.
ಈ ಸಂದರ್ಭದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವೃಂದಾವನಕ್ಕೆ ಭೇಟಿ ನೀಡಿ ಗುರುಗಳ ಪಾದಕಮಲಗಳಿಗೆ ವಿಶೇಷ ಪೂಜೆ ಸಲ್ಲಿಸಿ, ನಮನಗಳನ್ನು ಅರ್ಪಿಸಿದರು.
ಶ್ರೀಮದಾಚಾರ್ಯರ ಸನ್ಯಾಸಿ ಶಿಷ್ಯವರ್ಗದಲ್ಲಿ ದೃಢಕಾಯರೆಂದು ಪ್ರಸಿದ್ಧರಾದ ಮಹಾಜ್ಞಾನಿಗಳಾದ ಶ್ರೀಮದುಪೇಂದ್ರತೀರ್ಥರ ಪೀಠವಾದ ಶ್ರೀ ಪುತ್ತಿಗೆ ಮಠದ ಯತಿಪರಂಪರೆಯಲ್ಲಿ ಮಾತ್ರವಲ್ಲದೆ ಉಡುಪಿಯ ಅಷ್ಟಮಠಗಳ ಯತಿಸಂತತಿಯಲ್ಲಿಯೇ ವಿಶಿಷ್ಟ ಸ್ಥಾನ ಪಡೆದ ಮಹಾತಪಸ್ವಿವರೇಣ್ಯರಾದ ಶ್ರೀ ಸುಧೀಂದ್ರ ತೀರ್ಥ ಶ್ರೀಪಾದರು, ಶಾಪಾನುಗ್ರಹ ಸಮರ್ಥರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶ್ರೀಕೃಷ್ಣ ದೇವರಿಗೆ ಸನಕಾದಿ ಮುನಿಗಳು ಪೂಜಿಸುವುದನ್ನು ಸಾಕ್ಷಾತ್ಕಾರವಾಗಿ ಕಂಡು, ಅವರ ಅನುಗ್ರಹದಿಂದ ಶ್ರೀಕೃಷ್ಣ ಸಾಕ್ಷಾತ್ಕಾರವನ್ನು ಪಡೆದ ಮಹಾನ್ ಯತಿವರ್ಯರು ನಾಲ್ಕು ಬಾರಿ ಶ್ರೀಕೃಷ್ಣ ಪೂಜೆಯನ್ನು ನೆರವೇರಿಸಿದ ಶತಾಯುಷಿಗಳಾಗಿದ್ದರು. ವೃಂದಾವನಸ್ಥರಾಗಿದ್ದರೂ ಇಂದಿಗೂ ಭಕ್ತರಿಗೆ ಅನುಗ್ರಹ ಕರುಣಿಸುವ ಮಹಾಕರುಣಾಳುಗಳಾಗಿ, ಋಷ್ಯಶೃಂಗರ ಅವತಾರರೆಂದು ಪ್ರಸಿದ್ಧಿ ಪಡೆದಿದ್ದಾರೆ.
ಆರಾಧನಾ ಪರ್ವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವೇದಪಾರಾಯಣ, ವಿಶೇಷ ಪೂಜೆ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಸ್ಮರಣೆ ಸಲ್ಲಿಸಿದರು.
ಈ ಪವಿತ್ರ ಸಂದರ್ಭದಲ್ಲಿ ಅವರ ಅಂತರ್ಯಾಮಿಯಾದ ಪ್ರಾಣಪತಿ ಭೈಷ್ಮೀಸತ್ಯಾಸಮೇತ ವೀರವಿಠಲಾಭಿನ್ನ ರೂಪ್ಯಪೀಠಪುರಾಧೀಶನ ಚರಣಕಮಲಗಳಿಗೆ ಅನಂತ ನಮನಗಳು ಅರ್ಪಿಸಲಾಯಿತು.



