ಮಂಗಳೂರು : ಯಕ್ಷಗಾನ ಪ್ರಸಂಗವೊಂದರ ಪ್ರಚಾರದ ವೇಳೆ ಜಾತಿ ನಿಂದನೆ ಮಾಡಲಾಗಿದೆ ಎಂಬ ಆರೋಪ ಎದುರಿಸುತ್ತಿದ್ದ ಪ್ರಸಿದ್ಧ ಕಲಾವಿದ ಮಿಜಾರು ತಿಮ್ಮಪ್ಪ ಹಾಗೂ ಸಂಘಟಕ ಪೂರ್ಣೇಶ್ ಅವರನ್ನು ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶಿಸಿದೆ.
ಅಪರೂಪದ ಈ ಪ್ರಕರಣದಲ್ಲಿ ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆರೋಪಿಗಳನ್ನು ದೋಷಮುಕ್ತಗೊಳಿಸಿದೆ ನ್ಯಾಯವಾದಿ ಶಶಿ ರಾಜ್ ಕಾವೂರು ವಾದಿಸಿದ್ದರು.
ಕರ್ನಾಟಕ ಮೇಳದ ಪ್ರಸಿದ್ಧ ‘ಬ್ರಹ್ಮ ಬಲಾಂಡಿ’ ಎಂಬ ಯಕ್ಷಗಾನ ಪ್ರಸಂಗವನ್ನು ಸಂಘಟಕ ಪೂರ್ಣೇಶ್ ಅವರು ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದ್ದರು. ಈ ಪ್ರಸಂಗದ ರಚನೆಕಾರರಾದ ಅನಂತರಾಮ ಬಂಗಾಡಿಯವರು ಸೃಷ್ಟಿಸಿದ ಪಾತ್ರಗಳ ಹೆಸರನ್ನು ಕರಪತ್ರಗಳಲ್ಲಿ ಯಥಾವತ್ತಾಗಿ ಮುದ್ರಿಸಿ ಹಂಚಲಾಗಿತ್ತು. ಆದರೆ, ಈ ಪಾತ್ರಗಳ ಹೆಸರುಗಳ ಉಲ್ಲೇಖವು ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಕ್ಕೆ ಅವಮಾನಕಾರಿಯಾಗಿದೆ ಎಂದು ದಲಿತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದವು.
ದಲಿತ ಸಂಘಟನೆಗಳ ದೂರಿನ ಅನ್ವಯ, ಪೊಲೀಸರು ಪೂರ್ಣೇಶ್ ಮತ್ತು ಮಿಜಾರು ತಿಮ್ಮಪ್ಪ ಅವರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಕಲಮುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ತನಿಖೆ ವೇಳೆ ದೂರುದಾರರು ಹಲವಾರು ಸಾಕ್ಷಿಗಳನ್ನು ಹಾಜರುಪಡಿಸಿದ್ದರು. ವಿವಾದದ ಬೆನ್ನಲ್ಲೇ ಸಂಘಟಕರು ಸದ್ರಿ ಯಕ್ಷಗಾನವನ್ನು ರದ್ದುಪಡಿಸಿ ಬೇರೆ ಪ್ರಸಂಗವನ್ನು ಪ್ರದರ್ಶಿಸಿದ್ದರು. ಅಂತಿಮವಾಗಿ ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗಳ ಪರ ವಾದವನ್ನು ಪುರಸ್ಕರಿಸಿ ಅವರನ್ನು ಬಿಡುಗಡೆ ಮಾಡಿದೆ. ಆರೋಪಿಗಳ ಪರವಾಗಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ವಾದ ಮಂಡಿಸಿದ್ದರು.



