ಮಲ್ಪೆ: ಓಡಿಶಾ ಮೂಲದ ಮೀನುಗಾರನೊಬ್ಬ ಮಲ್ಪೆ ಬಂದರುದಲ್ಲಿ ಅನುಮಾನಾಸ್ಪದವಾಗಿ ಮೃತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.ಮೃತ ವ್ಯಕ್ತಿ ಸನಾತನ ಕಿಸನ್ (35) ಎಂದು ತಿಳಿದು ಬಂದಿದೆ,ಅವರು “ಶ್ರೀ ಈಶನಿಧಿ” ಬೋಟಿನಲ್ಲಿ ಕೆಲಸ ಮಾಡುತ್ತಿದ್ದರು.
ಪ್ರಸ್ತುತ ಮೀನುಗಾರಿಕೆ ಕೆಲಸ ಇಲ್ಲದ ಕಾರಣ ಬೋಟು ಮಲ್ಪೆ ಬಂದರಿನಲ್ಲಿ ನಿಲ್ಲಿಸಲಾಗಿದ್ದು, ಸನಾತನ ಅವರು ಬೋಟಿನಲ್ಲೇ ವಾಸಿಸುತ್ತಿದ್ದರು. ದಿನಾಂಕ 31-03-2026ರಂದು ರಾತ್ರಿ 9:30ರವರೆಗೆ ಬೋಟಿನಲ್ಲಿ ಕಂಡುಬಂದಿದ್ದ ಅವರು ಬಳಿಕ ಕಾಣೆಯಾಗಿದ್ದರು. ಈ ಬಗ್ಗೆ ಅವರ ತಮ್ಮ ಸುನೀಲ್ ನೀಡಿದ ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿತ್ತು.
ದಿನಾಂಕ 12-04-2026ರಂದು ಮಲ್ಪೆ ಬಂದರಿನ 3ನೇ ಟೀ ದಕ್ಕೆಯ ನೀರಿನಲ್ಲಿ ಸನಾತನ ಕಿಸನ್ ಅವರ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ, ಅವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.





