ಕಾರ್ಕಳ: ಸೈಕಲ್ ಸರ್ಕಸ್‌ನಲ್ಲಿ ಡ್ಯಾನ್ಸ್ ಮಾಡಿದ ವಿಚಾರಕ್ಕೆ ಮೂವರು ಸೇರಿಕೊಂಡು ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದಲ್ಲಿ ನಡೆದಿದೆ.
ವಿಜಯ ಕುಮಾರ್ (40) ಅವರು ಏಪ್ರಿಲ್ 12ರಂದು ದುರ್ಗಾನಗರದಲ್ಲಿ ನಡೆಯುತ್ತಿದ್ದ ಸೈಕಲ್ ಸರ್ಕಸ್‌ಗೆ ತೆರಳಿ ಡ್ಯಾನ್ಸ್ ಮಾಡಿ ಮನೆಗೆ ಹಿಂದಿರುಗುವಾಗ, ದುರ್ಗಾನಗರದ ಆಶ್ಲೇಶ್ ಹೋಟೆಲ್ ಬಳಿ ಅವರ ಸ್ನೇಹಿತರು ಗುರುಪ್ರಸಾದ್, ಶಿವ ಮತ್ತು ದಯಾನಂದ ಅಡ್ಡಗಟ್ಟಿದ್ದಾರೆ.
ಈ ವೇಳೆ “ನೀನು ಸೈಕಲ್ ಸರ್ಕಸ್‌ನಲ್ಲಿ ಡ್ಯಾನ್ಸ್ ಮಾಡಿ ನಮ್ಮ ಊರಿನ ಮರ್ಯಾದೆ ತೆಗೆದುಕೊಳ್ಳುತ್ತಿದ್ದೀಯ” ಎಂದು ಪ್ರಶ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಗುರುಪ್ರಸಾದ್ ಮುಖ ಮತ್ತು ಕೆನ್ನೆಗೆ ಹೊಡೆದು ತಳ್ಳಿ ನೆಲಕ್ಕೆ ಬಿದ್ದು, ಮೂವರು ಸೇರಿಕೊಂಡು ಕಾಲಿನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆ ವೇಳೆ ತಲೆಯ ಹಿಂಭಾಗ ಕಾಂಕ್ರೀಟ್‌ಗೆ ತಾಗಿ ರಕ್ತಗಾಯವಾಗಿದ್ದು, ವಿಜಯ ಕುಮಾರ್ ಬೊಬ್ಬೆ ಹಾಕುತ್ತಿದ್ದಂತೆ ಆರೋಪಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ವಿಜಯ ಎಂಬವರು ಗಾಯಾಳುವಿಗೆ ಸಹಾಯ ಮಾಡಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಹಾಗೂ ನಂತರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





