ಉಡುಪಿ : ಮಲ್ಪೆಯಲ್ಲಿ 2 ಕೋಟಿ ರೂಪಾಯಿಗೂ ಅಧಿಕ ಹೂಡಿಕೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮೀಯ ಸ್ನೇಹಿತರೇ ಸೇರಿ ಜಾಗ ವ್ಯವಹಾರದ ಹೆಸರಿನಲ್ಲಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.
ದೀಪಕ್ ಎಂಬವರು ನೀಡಿದ ದೂರಿನ ಪ್ರಕಾರ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಸಮಯದಿಂದ ಪರಿಚಯವಾಗಿದ್ದ ಪ್ರವೀಣ ದೇಶ್ ಭಾಗ್ ಎಂಬಾತ 2020ರ ಕೋವಿಡ್ ಅವಧಿಯಲ್ಲಿ ಜಾಗ ಖರೀದಿ–ಮಾರಾಟ ವ್ಯವಹಾರದಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿದ್ದಾನೆ.
ನಂತರ ಪ್ರಶಾಂತ್ ಎಲ್. ಸನೀಲ್ ಜೊತೆಗೂಡಿ ಉಡುಪಿ–ಕಾರ್ಕಳ ಭಾಗದಲ್ಲಿ ಕಡಿಮೆ ಬೆಲೆಗೆ ಜಾಗ ಸಿಗುತ್ತದೆ ಎಂದು ಹೇಳಿ ಪಾಲುದಾರಿಕೆಯಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ.
ದೂರುದಾರರು 28/09/2020ರಿಂದ 24/02/2025ರವರೆಗೆ ಹಂತ ಹಂತವಾಗಿ ಒಟ್ಟು 2 ಕೋಟಿ 11 ಲಕ್ಷ 18 ಸಾವಿರ 100 ರೂಪಾಯಿ ಹಣವನ್ನು ಆರೋಪಿಗಳಿಗೆ ನೀಡಿದ್ದಾರೆ ಎನ್ನಲಾಗಿದೆ.
ಆದರೆ, ಜಾಗವನ್ನು ದೂರುದಾರರ ಹೆಸರಿಗೆ ಮಾಡದೇ, ಹಣವನ್ನೂ ವಾಪಸು ನೀಡದೇ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ಪ್ರಕರಣದಲ್ಲಿ ಮೂರನೇ ಆರೋಪಿ ಆಗಿರುವ ಬ್ಯಾಂಕ್ ಅಧಿಕಾರಿಯೊಬ್ಬರು ಸಹ ಆರೋಪಿಗಳ ಜೊತೆ ಸೇರಿಕೊಂಡು ದೂರುದಾರರ ನಕಲಿ ಸಹಿ ಬಳಸಿ ಬ್ಯಾಂಕ್ ಖಾತೆ ತೆರೆದಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ದೀಪಕ್ ಹಾಗೂ ಶಿರಸಿಯ ನಿವಾಸಿ ಪ್ರವೀಣ್ ದೇಶ್ ಭಾಗ್ ಉಡುಪಿಯ ಕಾಲೇಜ್ ಒಂದರಲ್ಲಿ ಸ್ನೇಹಿತರಾಗಿದ್ದರು. ಪ್ರವೀಣ್ ಪ್ರಾಣ ಸ್ನೇಹಿತನಂತೆ ನಟಿಸಿ, ಜಾಗದ ವ್ಯಾಪಾರ ಮಾಡುವ ಎಂದು ಹೇಳಿ ದೀಪಕ್ ಬಳಿ ಕೋಟ್ಯಾಂತರ ರೂಪಾಯಿ ತೆಗೆದುಕೊಂಡು ವಂಚನೆ ಮಾಡಿರುತ್ತಾನೆ.ಪ್ರಾಣ ಸ್ನೇಹಿತ ಅಂತ ಹೇಳಿಕೊಂಡು ಉಂಡ ಮನೆಗೆ ದ್ರೋಹ ಎಸಗಿದ್ದಾನೆ ಈ ಪ್ರವೀಣ್.ಮೋಸ ಮಾಡು ಉದ್ದೇಶದಿಂದ ಕೆಲವು ವರ್ಷಗಳಿಂದ ಸಂಚು ನಡೆಸಿ ನಯವಾಗಿ ವಂಚನೆ ಮಾಡಿದ್ದಾನೆ.ಪೊಲೀಸರು ಈತನನ್ನು ಸರಿಯಾಗಿ ವಿಚಾರಣೆ ನಡೆಸಿದರೆ ಯಾವುದೇಲ್ಲ ಮತ್ತು ಯಾರಿಗೇಲ್ಲ ವಂಚನೆ ಮಾಡಿದ್ದಾನೆ ಎಂದು ತಿಳಿವುದು.
ಈ ಸಂಬಂಧ ಮಾನ್ಯ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿದ್ದು, ಅದರ ಆಧಾರದಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



