ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಸಂಭ್ರಮದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರರು ನಗರಕ್ಕೆ ಬಂದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣ ವಿಜಯ ಸಂಭ್ರಮಚರಣೆ ಮತ್ತು ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾವಿರಾರು ಮಂದಿ ಆರ್ಸಿಬಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಮತ್ತು ವಿಧಾನಸೌಧ ಎದುರು ಜಮಾಯಿಸಿದ್ದರು. ಈ ವೇಳೆ ಘೋರ ದುರಂತ ನಡೆದಿದೆ. ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 10ಕಿಂತ ಹೆಚ್ಚು ಮಂದಿ ಮೃತಟ್ಟಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.
ರಾಜ್ಯ ಸರ್ಕಾರದ ವತಿಯಿಂದ ಬುಧವಾರ (ಜೂ.04) ಬೆಂಗಳೂರಿನ ವಿಧಾನಸೌಧದಲ್ಲಿ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ ಸಂಭ್ರಮಾಚರಣೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಸಂಬಂಧ ಆರ್ಸಿಬಿ ಆಟಗಾರರು ಬೆಂಗಳೂರಿಗೆ ಬಂದಿದ್ದಾರೆ. ಆರ್ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಲು ವಿಧಾನಸೌಧದ ಎದುರು ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಜನರು ಸೇರಿದ್ದರು.
ಮಧ್ಯಾಹ್ನ 3:00 ಗಂಟೆಗೆ ಆರ್ಸಿಬಿ ಆಟಗಾರರು ಬೆಂಗಳೂರಿಗೆ ಆಗಮಿಸಿದರು. ಸಂಜೆ 4:30 ಸುಮಾರಿಗೆ ವಿಧಾನಸೌಧದಲ್ಲಿ ಆರ್ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಮಂದಿ ಆರ್ಸಿಬಿ ಅಭಿಮಾನಿಗಳು ವಿಧಾನಸೌಧದ ಎದುರು ಸೇರಿದ್ದರು.
ಸಂಜೆ 4:35ರ ಸುಮಾರಿಗೆ ಆರ್ಸಿಬಿ ಆಟಗಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸನ್ಮಾನಿಸಿದರು. ಈ ವೇಳೆ ಮಳೆ ಬಂದಿದ್ದರಿಂದ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟುಕುಗೊಳಿಸಲಾಯಿತು.
ಇದೇ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಮಂದಿ ಆರ್ಸಿಬಿ ಅಭಿಮಾನಿಗಳು ಸೇರಿದ್ದರು. ಕ್ರೀಡಾಂಗಣದ ಗೇಟ್ ನಂಬರ್ 5 ಮತ್ತು 6 ರ ಮುಖಾಂತರ ಪ್ರವೇಶಕ್ಕೆ ಅವಕಾಶ ನೀಡುವಂತೆ ಅಭಿಮಾನಿಗಳು ಪಟ್ಟು ಹಿಡಿದರು. ನಂತರ, ಗೇಟ್ ನಂಬರ್ 6ರ ಮೇಲೆ ಹತ್ತಿ ಕ್ರೀಡಾಂಗಣದ ಒಳಗೆ ನುಗ್ಗುಲು ಯತ್ನಿಸಿದರು. ಈ ವೇಳೆ ಕೆಳೆಗೆ ಬಿದ್ದು ಓರ್ವ ಯುವಕ ಕಾಲು ಮುರಿದುಕೊಂಡನು ಎನ್ನಲಾಗಿದೆ
ಗೇಟ್ ನಂ 18ರ ಬಳಿ ಅಭಿಮಾನಿಗಳಿಂದ ನೂಕುನುಗ್ಗಲು ಸಂಭವಿಸಿತು. ನೂಕುನುಗ್ಗಲಿನಿಂದ ಹಲವರು ಗಂಭೀರವಾಗಿ ಗಾಯಗೊಂಡು. ಪೊಲೀಸರು ಅಭಿಮಾನಿಗಳನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದರು. ಅತ್ತ, ಗೇಟ್ ನಂಬರ್ 12 ರಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಯಿತು. ಆಗ, ಕ್ರೀಡಾಂಗಣದ ಸಿಬ್ಬಂದಿ ಗೇಟ್ ತೆರದು ಅಭಿಮಾನಿಗಳನ್ನು ಒಳಗಡೆ ಬಿಡಲು ಆರಂಭಿಸಿದರು. ಏಕಾಏಕಿ ಅಭಿಮಾನಿಗಳು ಬ್ಯಾರಿಕೇಡ್ಗಳನ್ನು ತಳ್ಳಿ ಕ್ರೀಡಾಂಗಣದ ಒಳಗೆ ನುಗ್ಗಲು ಆರಂಭಿಸಿದ್ದರಿಂದ ಕಾಲ್ತುಳಿತ ಸಂಭವಿಸಿತು. ಈ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಕುಸಿದು ಬಿದ್ದರು. ತಕ್ಷಣ ಪೊಲೀಸರು ಮಹಿಳೆಯನ್ನು ಕಾರ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಕಾಲ್ತುಳಿತದಲ್ಲಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ವೈದೇಹಿ ಆಸ್ಪತ್ರೆ, ಶಿವಾಜಿನಗರದಲ್ಲಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದವರಲ್ಲಿ ಆರು ಮಂದಿ ಮತ್ತು ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 12 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಗಳ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ನೂಕುನಗ್ಗಲು ನಿಯಂತ್ರಿಸಲು ಯತ್ನಿಸಿದ್ದಾರೆ. ಆದರೆ ಪೊಲೀಸರಿಂದ ಜನರನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
