ಉಪ್ಪಿನಂಗಡಿ: ಕಬಕ ಪುತ್ತೂರು ರೈಲ್ವೇ ನಿಲ್ದಾಣದ ಹಾರಾಡಿ ಸೇತುವೆಯ ಬಳಿ ರೈಲು ಡಿಕ್ಕಿಯಾಗಿ ಯುವಕನೋರ್ವ ಮೃತಪಟ್ಟ ಘಟನೆ ಫೆ.20ರಂದು ನಡೆದಿದ್ದು, ಈತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಮೃತ ಯುವಕ ಉಪ್ಪಿನಂಗಡಿ ಗ್ರಾಮದ ಪುಳಿತ್ತಡಿ ಬಳಿಯ ಗೌಂಡತ್ತಿಗೆ ನಿವಾಸಿ ಸುಮತಿ ಎಂಬವರ ಪುತ್ರ ಪವನ್ ಕುಮಾರ್ (26) ಎಂದು ತಿಳಿದು ಬಂದಿದೆ.
ವ್ಯಾಪಾರಿ ಹಡಗೊಂದರಲ್ಲಿ ಉದ್ಯೋಗಿಯಾಗಿದ್ದ ಇವರು ಕೆಲವು ತಿಂಗಳಿನಿಂದ ಕೆಲಸಕ್ಕೆ ತೆರಳದೇ ಮನೆಯಲ್ಲೇ ಇದ್ದರು.
ಮಧ್ಯಾಹ್ನ ಮನೆ ಬಿಟ್ಟು ಹೋಗಿದ್ದ ಇವರು ತಾಯಿಯಲ್ಲಿ ನಾನು ಸಾಯುತ್ತೇನೆ ಎಂದು ಹೇಳಿದ್ದ ಎನ್ನಲಾಗಿದೆ.
ಅಲ್ಲದೇ ತನ್ನ ಇನ್ಸ್ಟಾಗ್ರಾಂ ಅಕೌಂಟ್‌ನ ಡಿಪಿಯಲ್ಲೂ ‘ಐ ಆ್ಯಮ್ ಡೆಡ್’ ಎಂಬ ಡಿಪಿ ಹಾಕಿಕೊಂಡಿದ್ದ ಎಂದು ತಿಳಿದುಬಂದಿದೆ.
ಕಬಕ ಪುತ್ತೂರು ರೈಲ್ವೆ ನಿಲ್ದಾಣದ ಬಳಿಯ ಹಾರಾಡಿ ಬ್ರಿಡ್ಜ್ ಸಮೀಪ ಫೆ.20ರಂದು ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿತ್ತು.
ಕಪ್ಪು ಪ್ಯಾಂಟ್, ಫುಲ್ ಕೈ ಶರ್ಟ್ ಧರಿಸಿ, ಕೈಯಲ್ಲಿ ವಾಚ್, ಪಕ್ಕದಲ್ಲೇ ಕಪ್ಪು ಬಣ್ಣದ ಬ್ಯಾಗ್ ಪತ್ತೆಯಾಗಿತ್ತು. ರೈಲ್ವೇ ಹಳಿಯಲ್ಲಿ ಆಂಡ್ರಾಯ್ಡ್ ಮೊಬೈಲ್ ಪುಡಿಯಾಗಿ ಬಿದ್ದಿತ್ತು.
ಈ ಕುರಿತು ರೈಲಿನ ಪೈಲಟ್ ಸ್ಟೇಷನ್‌ಗೆ ಮಾಹಿತಿ ನೀಡಿದ್ದರು. ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮಂಗಳೂರಿಗೆ ರವಾನಿಸಿದ್ದರು ಎಂದು ತಿಳಿದು ಬಂದಿದೆ.
ಮಗ ಮನೆಯಿಂದ ಹೋದವ ವಾಪಸ್ ಬರಲಿಲ್ಲವೆಂದು ಈತನ ತಾಯಿ ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಸದಸ್ಯ ಸುರೇಶ್ ಅತ್ರಮಜಲು ಅವರ ಗಮನಕ್ಕೆ ತಂದಿದ್ದು, ಈತನ ಬಗ್ಗೆ ಇವರು ಮಾಹಿತಿ ಕಲೆ ಹಾಕುತ್ತಿದ್ದಾಗ ರೈಲ್ವೇ ಹಳಿಯಲ್ಲಿ ಮೃತದೇಹ ಪತ್ತೆಯಾದ ಸುದ್ದಿ ತಿಳಿದುಬಂತು. ಪರಿಶೀಲನೆ ನಡೆಸಿದಾಗ ಇದು ಈತನದ್ದೇ ಮೃತದೇಹ ಎಂದು ತಿಳಿದು ಬಂದಿದೆ.
ಮಾನಸಿಕ ಖಿನ್ನತೆಯಿಂದ ಈತ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.



