Home Karavali Karnataka ಮಳೆಗಾಲದಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಮೆಸ್ಕಾಂ ಆದ್ಯತೆ ನೀಡಬೇಕು : ಗುರ್ಮೆ ಸುರೇಶ್ ಶೆಟ್ಟಿ…!!

ಮಳೆಗಾಲದಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಮೆಸ್ಕಾಂ ಆದ್ಯತೆ ನೀಡಬೇಕು : ಗುರ್ಮೆ ಸುರೇಶ್ ಶೆಟ್ಟಿ…!!

ಉಡುಪಿ: ಗಾಳಿ, ಮಳೆಗೆ ಮರ ಬಿದ್ದು ವಿದ್ಯುತ್ ಸಮಸ್ಯೆ ವ್ಯಾಪಕವಾಗಿದ್ದು, ಮಳೆಗಾಲದಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಮೆಸ್ಕಾಂ ಆದ್ಯತೆ ನೀಡಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಉಡುಪಿ ತಾಲೂಕಿನ 10 ಗ್ರಾಮ ಪಂಚಾಯತ್‌ಗಳಲ್ಲಿ ಮುಂಗಾರು ಮಳೆ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲೆಗಳು ಪುನರಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲೂ ನಿರಂತರ ವಿದ್ಯುತ್ ಪೂರೈಕೆಯಾಗಬೇಕು. ಕುಡಿಯುವ ನೀರು ಪೂರೈಕೆ ನಿಟ್ಟಿನಲ್ಲಿ ವಿದ್ಯುತ್ ಒದಗಿಸಲು ಆದ್ಯತೆ ಕೊಡಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕು. ಅಲ್ಲದೇ ಪ್ರತಿ ಗ್ರಾಮದಲ್ಲೂ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಚರಂಡಿ ಹಾಗೂ ತೋಡುಗಳ ಹೂಳೆತ್ತುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮೆಸ್ಕಾಂ ಲೈನ್‌ಮೆನ್‌ಗಳ ಕೊರತೆ ಹೊಂದಿದ್ದು ನನ್ನ ಮನೆಯಲ್ಲೂ ಮೊನ್ನೆ ದಿನವಿಡೀ ವಿದ್ಯುತ್ತಿರಲಿಲ್ಲ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು. ನಾನಾ ಇಲಾಖಾಧಿಕಾರಿಗಳು ಇನ್ನು 2-3ತಿಂಗಳು ಅಲರ್ಟ್ ಆಗಿ ಕಾರ್ಯನಿರ್ವಹಿಸಬೇಕು. ಮೊಬೈಲ್ ಸ್ವಿಚ್‌ಆಫ್ ಮಾಡಬೇಡಿ ಎಂದು ಸೂಚಿಸಿದರು.

ಸಾಮಾಜಿಕ ಅರಣ್ಯಕ್ಕೆ ಒತ್ತು ನೀಡಿ. ರೋಡ್ ಮಾರ್ಜಿನ್‌ನಿಂದ 6ಮೀ. ಆಚೆಗೆ ಗಿಡ ನೆಡುವಂತೆ ತಿಳಿಸಿದರು. ಶಾಲೆಗಳ ಹಳೆ ಕಟ್ಟಡ, ಆವರಣ ಗೋಡೆ ಕುಸಿಯುವ ಅಪಾಯವಿದ್ದು ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ನಿಗಾ ಇಡಬೇಕು ಎಂದು ಸೂಚಿಸಿದರು.

ಜಲಜೀವನ್ ಮಿಶನ್ ಯೋಜನೆಯಡಿ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಪೈಪ್‌ಲೈನ್, ಟ್ಯಾಂಕ್ ಸಂಪರ್ಕ ಪೂರ್ಣವಾದ ಕೂಡಲೇ ವಾರಾಹಿ ಜಲಮೂಲದಿಂದ ನಳ್ಳಿ ಸಂಪರ್ಕಗಳಿಗೆ ಕುಡಿಯುವ ನೀರು ಒದಗಿಸಲಾಗುವುದು ಎಂದರು.

5.25 ಕೋಟಿ ರೂ. ಬಿಡುಗಡೆ: ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಬೆಡ್‌ಗಳ ಆಸ್ಪತ್ರೆಯಾಗಿ ಪರಿವರ್ತಿಸುವ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ರಾಜ್ಯ ಆರೋಗ್ಯ ಇಲಾಖೆ ಸಮುದಾಯ ಆರೋಗ್ಯ ಕೇಂದ್ರವಾಗಿ ಮಂಜೂರಾತಿ ಮಾಡಿದ್ದು ನಿಗದಿಮಾಡಿದ 17ಕೋಟಿ ರೂ. ಅನುದಾನದಲ್ಲಿ 5.25 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಗುರ್ಮೆ ಹೇಳಿದರು. ಸಭೆಯಲ್ಲಿ ತಹಶೀಲ್ದಾರ್ ಗುರುರಾಜ್ ಉಪಸ್ಥಿತರಿದ್ದರು.