ಮಲ್ಪೆ: ಉಡುಪಿ ಜಿಲ್ಲೆಯಲ್ಲಿ ಅಕ್ರಮವಾಗಿ ವಾಸವಾಗಿದ್ದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಶಿಕ್ಷೆ ಮುಗಿದ ಬಳಿಕ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲು ಪೊಲೀಸರು ಕರೆದೊಯ್ದಿದ್ದಾರೆ.
ದಿನಾಂಕ 11-10-2024 ರಂದು ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆಯ ಸರಹದ್ದಿನ ವಡಬಾಂಡೇಶ್ವರ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಕಂಡುಬಂದಿದ್ದ ಬಾಂಗ್ಲಾ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ವಿಚಾರಣೆ ನಡೆಸಲಾಗಿತ್ತು.
ಅನಧಿಕೃತವಾಗಿ ವಾಸವಾಗಿದ್ದ 10 ಅಕ್ರಮ ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು. ನ್ಯಾಯಾಲಯವು ವಿಚಾರಣೆ ನಡೆಸಿ ದಿನಾಂಕ 08-12-2025 ರಂದು 10 ಅಕ್ರಮ ಬಾಂಗ್ಲಾ ವಲಸಿಗರಿಗೆ 02 ವರ್ಷ ಶಿಕ್ಷೆ ಹಾಗೂ ರೂ. 10,000 ದಂಡ ವಿಧಿಸಿತ್ತು.
ಸದ್ರಿ ಅಕ್ರಮ ಬಾಂಗ್ಲಾ ವಲಸಿಗರು ಉಡುಪಿ ಜಿಲ್ಲಾ ಕಾರಾಗೃಹ ನಂತರ ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷಾ ಬಂದಿಯಾಗಿದ್ದರು. ಅವರ ಶಿಕ್ಷಾ ಅವಧಿಯು ದಿನಾಂಕ 10-10-2026 ರಂದು ಮುಕ್ತಾಯಗೊಂಡಿತ್ತು.
ಸದ್ರಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಅವರ ದೇಶಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಕುರಿತು ಭಾರತದ ಗೃಹ ಸಚಿವಾಲಯ ಮತ್ತು ಪ್ರಾದೇಶಿಕ ವಿದೇಶಿಯರ ನೋಂದಣಾಧಿಕಾರಿ, ಶಾಂತಿನಗರ, ಬೆಂಗಳೂರು ಇವರು ಆದೇಶ ಹೊರಡಿಸಿದ್ದರು.
ಸದ್ರಿ ಆದೇಶದಂತೆ 10 ಅಕ್ರಮ ಬಾಂಗ್ಲಾ ವಲಸಿಗರನ್ನು ಬೆಂಗಳೂರಿನಿಂದ ರೈಲಿನಲ್ಲಿ ಕರೆದುಕೊಂಡು Commandant & Nodal Officer BSF Malda, West Bengal ಇವರ ಮುಂದೆ ಭಾರತ ದೇಶದಿಂದ ಗಡಿಪಾರು ಪ್ರಕ್ರಿಯೆ ಬಗ್ಗೆ ಹಾಜರುಪಡಿಸಲು ಮಲ್ಪೆ ವೃತ್ತ ನಿರೀಕ್ಷಕರಾದ ರಾಮಚಂದ್ರ ನಾಯ್ಕ ಮತ್ತು ಪಿ ಎಸ್ ಐ ಅನಿಲ್ ಕುಮಾರ್ ಹಾಗೂ ಸಿಬ್ಬಂದಿಗಳ ಬೆಂಗಾವಲಿನೊಂದಿಗೆ ದಿನಾಂಕ 23-11-2026 ರಂದು ಉಡುಪಿಯಿಂದ ತೆರಳಿದ್ದಾರೆ.
ಸದ್ರಿ ಗಡಿಪಾರು ಪ್ರಕ್ರಿಯೆಯು ಶ್ರೀ ಹರಿರಾಮ್ ಶಂಕರ್ ಐಪಿಎಸ್, ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾ ವಿದೇಶಿಯರ ನೋಂದಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಸದ್ರಿ ಪ್ರಕ್ರಿಯೆಯಲ್ಲಿ ಹರೀಶ್ ಆರ್., ಪೊಲೀಸ್ ನಿರೀಕ್ಷಕರು, ಜಿಲ್ಲಾ ವಿಶೇಷ ವಿಭಾಗ, ಪ್ರದೀಪ್ ಎಎಸ್ಐ, ಅಮರ್ ಕುಮಾರ್ ಮತ್ತು ಮೈತ್ರಿ, ಜಿಲ್ಲಾ ವಿದೇಶಿಯರ ವಿಭಾಗ ಇವರು ಸಹಕರಿಸಿದ್ದಾರೆ.









