ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡನ ಸಮೀಪದ ನೂಜಿಬಾಳ್ತಿಲ ಶಾಖೆಯಲ್ಲಿ ನಕಲಿ ಚಿನ್ನದ ಆಭರಣಗಳನ್ನು ಅಸಲಿ ಚಿನ್ನವೆಂದು ಅಡವಿಟ್ಟು ಬ್ಯಾಂಕಿಗೆ ರೂ. 8.03 ಲಕ್ಷಗಳಷ್ಟು ವಂಚನೆ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಚಿನ್ನದ ಮೌಲ್ಯಮಾಪಕ ಸೇರಿ ಮೂವರು ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಾದ ಶ್ರೀ ಯೋಗೇಶ್ ಎಸ್, ತಂದೆ ಬಸವರಾಜ್, ವಯಸ್ಸು ಸುಮಾರು 42 ವರ್ಷ, ಸಹಾಯಕ ಪ್ರಧಾನ ವ್ಯವಸ್ಥಾಪಕರು (Assistant General Manager) ಮತ್ತು ಉಪ ಪ್ರಾದೇಶಿಕ ವ್ಯವಸ್ಥಾಪಕರು (Deputy Regional Manager), ಬ್ಯಾಂಕ್ ಆಫ್ ಬರೋಡಾ, ಪುತ್ತೂರು ವಲಯ ಇವರು ದೂರು ನೀಡಿದ್ದಾರೆ.
ಆರೋಪಿಗಳು:
- ಶ್ರೀ ಲಕ್ಷ್ಮಿ ನಾರಾಯಣ (ಚಿನ್ನದ ಮೌಲ್ಯಮಾಪಕರು) – ವಿಳಾಸ: 1-158, ಪಿಜಕ್ಕಲ, ಕಡಬ
- ಶ್ರೀ ಎ. ಸದಾನಂದ – ವಿಳಾಸ: ಮನೆ ಸಂಖ್ಯೆ 1-78, ಕಂಗುಲೆ ಮನೆ, ಕಡಬ ಅಂಚೆ, ಕಡಬ ತಾಲೂಕು
- ಶ್ರೀ ಸತ್ಯಾನಂದ ಗೌಡ – ವಿಳಾಸ: 2-58, ಬಳ್ಳೆರಿ ಮನೆ, ನೂಜಿಬಾಳ್ತಿಲ ಗ್ರಾಮ ಮತ್ತು ಅಂಚೆ, ಕಡಬ ತಾಲೂಕು, ಎಂದು ತಿಳಿದು ಬಂದಿದೆ.
ಆರೋಪಿಗಳು ನೂಜಿಬಾಳ್ತಿಲ ಶಾಖೆಯಲ್ಲಿ ನಕಲಿ ಚಿನ್ನದ ಆಭರಣಗಳನ್ನು ಅಸಲಿ ಚಿನ್ನವೆಂದು ಅಡವಿಡುವ ಮೂಲಕ, ವಿವಿಧ ದಿನಾಂಕಗಳಲ್ಲಿ ಬ್ಯಾಂಕಿಗೆ ರೂ. 8.03 ಲಕ್ಷಗಳಷ್ಟು ವಂಚನೆ ಎಸಗಿದ್ದು, ಈ ಮೂಲಕ ಮೋಸದಿಂದ ಚಿನ್ನದ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂಬುದು ದೂರಿನಲ್ಲಿ ತಿಳಿಸಲಾಗಿದೆ.
ಬ್ಯಾಂಕಿನ ಅಧಿಕೃತ ಚಿನ್ನದ ಮೌಲ್ಯಮಾಪಕರಾದ ಶ್ರೀ ಲಕ್ಷ್ಮೀ ನಾರಾಯಣ ಅವರು, ಸಾಲಗಾರರಾದ ಶ್ರೀ ಎ. ಸದಾನಂದ ಮತ್ತು ಶ್ರೀ ಸತ್ಯಾನಂದ ಗೌಡ ಅವರೊಂದಿಗೆ ಶಾಮೀಲಾಗಿ, ಉದ್ದೇಶಪೂರ್ವಕವಾಗಿ ಮತ್ತು ಅಪ್ರಾಮಾಣಿಕವಾಗಿ, ನಕಲಿ ಚಿನ್ನದ ಆಭರಣಗಳನ್ನು ಅಸಲಿ ಚಿನ್ನವೆಂದು ದೃಢೀಕರಿಸಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



