Home Latest ಶಬರಿಮಲೆಯಲ್ಲಿ ರಹಸ್ಯ ಚಿತ್ರೀಕರಣಕ್ಕೆ ಬ್ರೇಕ್ : ನಿಯಮ ಉಲ್ಲಂಘಿಸಿದರೆ ಅರೆಸ್ಟ್ : ಮೊಬೈಲ್‌ ಜಪ್ತಿ…!!

ಶಬರಿಮಲೆಯಲ್ಲಿ ರಹಸ್ಯ ಚಿತ್ರೀಕರಣಕ್ಕೆ ಬ್ರೇಕ್ : ನಿಯಮ ಉಲ್ಲಂಘಿಸಿದರೆ ಅರೆಸ್ಟ್ : ಮೊಬೈಲ್‌ ಜಪ್ತಿ…!!

ಶಬರಿಮಲೆ : ಕೇರಳದ ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮೊಬೈಲ್ ಮೂಲಕ ರಹಸ್ಯವಾಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ಅಯ್ಯಪ್ಪ ಸ್ವಾಮಿಯ ವಿಗ್ರಹ, ಪವಿತ್ರ 18 ಮೆಟ್ಟಿಲುಗಳು (ಪತಿನೆಟ್ಟಂಪಾಡಿ), ಮೇಲ್ತಿರುಮುಟ್ಟಂ ಹಾಗೂ ಮಾಳಿಗಪುರಂ ದೇವಿ ಸನ್ನಿಧಿಯ ದೃಶ್ಯಗಳನ್ನು ರಹಸ್ಯವಾಗಿ ಸೆರೆಹಿಡಿದು ಯೂಟ್ಯೂಬ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಗಂಭೀರ ಎಚ್ಚರಿಕೆ ನೀಡಿದೆ.

ಈ ವರದಿಯ ಹಿನ್ನೆಲೆಯಲ್ಲಿ ದೇವಸ್ವಂ ವಿಜಿಲೆನ್ಸ್ ತನಿಖೆ ನಡೆಸಿ ವರದಿ ಸಲ್ಲಿಸಿದೆ. ದೇವಾಲಯದ ಒಳಭಾಗದಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ಈಗಾಗಲೇ ಕೇರಳ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ಆದರೂ ಕೆಲವರು ನಿಯಮಗಳನ್ನು ಉಲ್ಲಂಘಿಸಿ ರಹಸ್ಯವಾಗಿ ಚಿತ್ರೀಕರಣ ನಡೆಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಾಗಿ ನಿಯಮ ಉಲ್ಲಂಘಿಸುವವರನ್ನು ಬಂಧಿಸುವುದರ ಜೊತೆಗೆ ಅವರ ಮೊಬೈಲ್ ಫೋನ್ ಮತ್ತು ಕ್ಯಾಮೆರಾಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ಕೆಲವು ಯೂಟ್ಯೂಬರ್‌ಗಳು ಹಾಗೂ ವ್ಲಾಗರ್‌ಗಳು ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಲು ವಿಭಿನ್ನ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

ಶರ್ಟ್ ಕಿಸೆ, ಬ್ಯಾಗ್‌ಗಳು ಹಾಗೂ ಹೇರ್ ಬ್ಯಾಂಡ್‌ಗಳಲ್ಲಿ ಮೊಬೈಲ್ ಫೋನ್‌ಗಳನ್ನು ಬಚ್ಚಿಟ್ಟುಕೊಂಡು ರಹಸ್ಯವಾಗಿ ವಿಡಿಯೋ ಚಿತ್ರೀಕರಿಸುತ್ತಿದ್ದಾರೆ. ಬಳಿಕ ಈ ದೃಶ್ಯಗಳನ್ನು ಸಾಮಾನ್ಯ ದೃಶ್ಯಗಳೊಂದಿಗೆ ಎಡಿಟ್ ಮಾಡಿ ಯೂಟ್ಯೂಬ್ ಹಾಗೂ ವಾಟ್ಸಾಪ್ ಗುಂಪುಗಳಲ್ಲಿ ಹರಿಬಿಡುತ್ತಿದ್ದಾರೆ. ಹೆಚ್ಚಿನ ಲೈಕ್ಸ್ ಮತ್ತು ಶೇರ್‌ಗಳನ್ನು ಪಡೆಯುವ ಉದ್ದೇಶದಿಂದ ಇಂತಹ ಕೃತ್ಯಗಳಲ್ಲಿ ತೊಡಗಿರುವ ಶಂಕೆ ವ್ಯಕ್ತವಾಗಿದೆ.

ಶಬರಿಮಲೆಯಂತಹ ಸೂಕ್ಷ್ಮ ಧಾರ್ಮಿಕ ಕ್ಷೇತ್ರದ ಒಳಭಾಗದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವುದು ಭದ್ರತಾ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.

ರಹಸ್ಯವಾಗಿ ಸೆರೆಹಿಡಿಯುವ ಇಂತಹ ವಿಡಿಯೋಗಳನ್ನು ಸಮಾಜವಿರೋಧಿ ಹಾಗೂ ಉಗ್ರಗಾಮಿ ಗುಂಪುಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

ಈ ಹಿನ್ನೆಲೆಯಲ್ಲಿ ಸನ್ನಿಧಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಅನುಮಾನಾಸ್ಪದವಾಗಿ ಮೊಬೈಲ್ ಬಳಸುವವರ ಮೇಲೆ ನಿಗಾ ಇರಿಸಲಾಗಿದೆ.

ಇನ್ನೊಂದೆಡೆ, ಈ ಬಾರಿಯ ಶಬರಿಮಲೆ ಯಾತ್ರೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿರುವುದು ತಿರುವಾಂಕೂರು ದೇವಸ್ವಂ ಮಂಡಳಿಯ ಆತಂಕಕ್ಕೆ ಕಾರಣವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು, ವಿಜಿಲೆನ್ಸ್ ಹಾಗೂ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವರ್ಚುವಲ್ ಕ್ಯೂ ಬುಕಿಂಗ್ ನಿರ್ವಹಿಸುತ್ತಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸಂಸ್ಥೆಯಿಂದಲೂ ಪಂಪಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಪಂಪಾ ಮೂಲಕ 59,601 ಭಕ್ತರು ದರ್ಶನಕ್ಕೆ ಆಗಮಿಸಿದ್ದು, ವರ್ಚುವಲ್ ಕ್ಯೂ ಬುಕ್ ಮಾಡಿದ್ದವರ ಪೈಕಿ ಸುಮಾರು 47 ಸಾವಿರ ಮಂದಿ ಮಾತ್ರ ಹಾಜರಾಗಿದ್ದಾರೆ.

ಸುಮಾರು 23 ಸಾವಿರ ಭಕ್ತರು ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದರೂ ದರ್ಶನಕ್ಕೆ ಬಂದಿಲ್ಲ ಎನ್ನಲಾಗಿದೆ.

ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಅನಗತ್ಯ ನಿರ್ಬಂಧಗಳನ್ನು ಸಡಿಲಿಸುವಂತೆ ತಿರುವಾಂಕೂರು ದೇವಸ್ವಂ ನೌಕರರ ಸಂಘಟನೆ ಒತ್ತಾಯಿಸಿದೆ. ಶಬರಿಮಲೆಗೆ ಆಗಮಿಸುವ ಭಕ್ತರಿಗೆ ಯಾವುದೇ ಅಡೆತಡೆಯಿಲ್ಲದೆ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಸನ್ನಿಧಾನದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಿ ಭಕ್ತರಿಗೆ ಅನುಕೂಲಕರ ವಾತಾವರಣ ನಿರ್ಮಿಸಬೇಕು ಎಂದು ಸಂಘಟನೆ ಶಿಫಾರಸು ಮಾಡಿದೆ. ಒಂದೆಡೆ ದೇವಾಲಯದ ಭದ್ರತೆಗಾಗಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸುವ ಸಿದ್ಧತೆ ನಡೆಯುತ್ತಿದ್ದರೆ, ಮತ್ತೊಂದೆಡೆ ಭಕ್ತರಿಗೆ ಸುಗಮ ದರ್ಶನ ಕಲ್ಪಿಸಲು ನಿರ್ಬಂಧಗಳನ್ನು ಸಡಿಲಿಸುವ ಒತ್ತಾಯ ಕೇಳಿಬಂದಿದೆ. ಈ ಎರಡೂ ವಿಚಾರಗಳು ಇದೀಗ ಶಬರಿಮಲೆ ಆಡಳಿತ ವ್ಯವಸ್ಥೆಯ ಮುಂದಿರುವ ಪ್ರಮುಖ ಸವಾಲುಗಳಾಗಿವೆ.