Home Latest ಇಸ್ರೇಲ್‌ನಲ್ಲಿ ಮಂಗಳೂರಿನ ವ್ಯಕ್ತಿಯ ನಿಗೂಢ ಸಾವು : ತಿಂಗಳ ಬಳಿಕ ತಾಯ್ನಾಡಿಗೆ ಮೃತದೇಹ…!!

ಇಸ್ರೇಲ್‌ನಲ್ಲಿ ಮಂಗಳೂರಿನ ವ್ಯಕ್ತಿಯ ನಿಗೂಢ ಸಾವು : ತಿಂಗಳ ಬಳಿಕ ತಾಯ್ನಾಡಿಗೆ ಮೃತದೇಹ…!!

ಮಂಗಳೂರು: ಉದ್ಯೋಗ ಅರಸಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರು ಮೂಲದ ವ್ಯಕ್ತಿಯೊಬ್ಬರು ನಿಗೂಢವಾಗಿ ಮೃತಪಟ್ಟಿದ್ದು, ಸುಮಾರು ಒಂದು ತಿಂಗಳ ಬಳಿಕ ಅವರ ಮೃತದೇಹ ತಾಯ್ನಾಡಿಗೆ ತಲುಪಿದೆ.

ಸಾವಿನ ಸುತ್ತ ಹಲವು ಅನುಮಾನಗಳು ಮೂಡಿದ್ದು, ಕೊಲೆ ನಡೆದಿರುವ ಶಂಕೆ ವ್ಯಕ್ತಪಡಿಸಿರುವ ಕುಟುಂಬಸ್ಥರು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವೆಲ್ (41) ಮೃತಪಟ್ಟವರು.

ಕಳೆದ ಒಂದೂವರೆ ವರ್ಷದಿಂದ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದ ಅವರು, ಆರಂಭದಲ್ಲಿ ಟೆಲ್ ಅವೀವ್‌ನ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ನಝರೆತ್ ಸಮೀಪದ ನೊಫ್ ಹಗಲಿಲ್‌ನ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು.

ಪತ್ನಿಗೆ ಕೊನೆಯ ಸಂದೇಶ; ಬಳಿಕ ನಾಪತ್ತೆ!: ಅಕ್ಟೋಬರ್ 16ರಂದು ಕುಟುಂಬಸ್ಥರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದ ಶಡ್ರಕ್, ಅದೇ ದಿನ ರಾತ್ರಿ 8.49ಕ್ಕೆ ಪತ್ನಿಗೆ ಸಂದೇಶ ಕಳುಹಿಸಿದ್ದರು. ಬಳಿಕ ಏಕಾಏಕಿ ಸಂಪರ್ಕ ಕಡಿತಗೊಂಡಿದ್ದು, ಅವರ ಮೊಬೈಲ್ ಕೂಡ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಅಕ್ಟೋಬರ್ 21ರಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದರು.

ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಸಂಸದ ಬ್ರಿಜೇಶ್ ಚೌಟ ಹಾಗೂ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೂ ಮನವಿ ಸಲ್ಲಿಸಿ, ಶಡ್ರಕ್ ಪತ್ತೆಗೆ ನೆರವು ಕೋರಿದ್ದರು.

ವಾರದ ಬಳಿಕ ಸಾವಿನ ಸುದ್ದಿ: ತಿಂಗಳ ಬಳಿಕ ಮೃತದೇಹ: ಶಡ್ರಕ್ ನಾಪತ್ತೆಯಾದ ಸುಮಾರು ಒಂದು ವಾರದ ಬಳಿಕ ಅವರು ಮೃತಪಟ್ಟಿರುವ ಸುದ್ದಿ ಕುಟುಂಬಸ್ಥರಿಗೆ ತಲುಪಿತ್ತು. ಇದೀಗ ಸುಮಾರು ಒಂದು ತಿಂಗಳ ಬಳಿಕ ಮೃತದೇಹವನ್ನು ಭಾರತಕ್ಕೆ ರವಾನಿಸಲಾಗಿದ್ದು, ನವೆಂಬರ್ 24ರಂದು ರಾತ್ರಿ ತಾಯ್ನಾಡಿಗೆ ತಲುಪಿದೆ.

ಸಾವಿನ ಹಿಂದಿನ ರಹಸ್ಯ ಬಯಲಿಗೆಳೆಯಲು ಆಗ್ರಹ: ಶಡ್ರಕ್ ಅವರ ಅನಿರೀಕ್ಷಿತ ಸಾವಿನಿಂದ ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಇದು ಸಹಜ ಸಾವಲ್ಲ, ಕೊಲೆ ನಡೆದಿರುವ ಸಾಧ್ಯತೆಯಿದೆ ಎಂದು ಶಂಕಿಸಿರುವ ಕುಟುಂಬಸ್ಥರು, ಇಸ್ರೇಲ್‌ನಲ್ಲಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸಾವಿನ ಹಿಂದಿನ ಸತ್ಯಾಂಶವನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ.