ಬ್ರಹ್ಮಾವರ: ಮಂಗಳ ಲಕ್ಷದ್ವೀಪ್ ಎಕ್ಸ್ಪ್ರೆಸ್ ರೈಲಿನಿಂದ ಬಿದ್ದು ಗಾಯಗೊಂಡಿದ್ದ ಅಪರಿಚಿತ ಪ್ರಯಾಣಿಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮೃತ ವ್ಯಕ್ತಿಯ ವಯಸ್ಸು ಸುಮಾರು 35 ವರ್ಷ ಎಂದು ಅಂದಾಜಿಸಲಾಗಿದ್ದು, ಇದುವರೆಗೆ ಆತನ ಯಾವುದೇ ಗುರುತು ಪತ್ತೆಯಾಗಿಲ್ಲ.
ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಉಡುಪಿಯ ASI ರಾಜು ಚೌಧುರಿ (55) ನೀಡಿದ ಮಾಹಿತಿ ಪ್ರಕಾರ, ಬೆಳಗ್ಗೆ 1:10ಕ್ಕೆ ಹಣೇಹಳ್ಳಿ ಗ್ರಾಮದ ನೀಲಾವರ ರೈಲ್ವೇ ಟ್ರ್ಯಾಕ್ ಕಿ.ಮೀ. ಸಂಖ್ಯೆ 678/10 ರ ಬಳಿ ಘಟನೆ ನಡೆದಿದೆ.
ರೈಲು ನಂಬರ್ 12617 ಮಂಗಳ ಲಕ್ಷದ್ವೀಪ್ ಎಕ್ಸ್ಪ್ರೆಸ್ನಲ್ಲಿ ಟಿಕೆಟ್ ನಂಬರ್ AOB 60733048A ಯಲ್ಲಿ ಮಂಗಳೂರಿನಿಂದ ಆಗ್ರಾ ಕ್ಯಾಂಟ್ಗೆ ಪ್ರಯಾಣಿಸುತ್ತಿದ್ದ ವ್ಯಕ್ತಿ ರೈಲಿನಿಂದ ಕೆಳಗೆ ಬಿದ್ದು, ಕಾಲು ಮತ್ತು ತಲೆಗೆ ಗಾಯಗೊಂಡಿದ್ದರು.
ಅಲ್ಲಿನ ಸಾರ್ವಜನಿಕರ ಸಹಾಯದಿಂದ ಆತನನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ಸಂಜೆ 5:32ಕ್ಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಮೃತನ ಗುರುತು ಪತ್ತೆಗೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.



