Home Crime ಪಡುಬಿದ್ರಿ: ಬಸ್ ಅಡ್ಡ ಹಾಕಿ ಚಾಲಕನಿಗೆ ಜಾತಿ ನಿಂದನೆ, ಜೀವ ಬೆದರಿಕೆ – ಪ್ರಕರಣ ದಾಖಲು…!!

ಪಡುಬಿದ್ರಿ: ಬಸ್ ಅಡ್ಡ ಹಾಕಿ ಚಾಲಕನಿಗೆ ಜಾತಿ ನಿಂದನೆ, ಜೀವ ಬೆದರಿಕೆ – ಪ್ರಕರಣ ದಾಖಲು…!!

ಪಡುಬಿದ್ರಿ: 2 ನಿಮಿಷ ತಡವಾದ ಕಾರಣಕ್ಕೆ ಸಿಟ್ಟಿಗೆದ್ದ ಬಸ್ ಚಾಲಕನೊಬ್ಬ ಮತ್ತೊಂದು ಬಸ್ಸಿಗೆ ಅಡ್ಡ ಹಾಕಿ, ಚಾಲಕನಿಗೆ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ ಘಟನೆ ಎರ್ಮಾಳು ಬಳಿ ನಡೆದಿದೆ.

ದೂರುದಾರರನ್ನು ಪಡುಬಿದ್ರೆ ಕಂಚಿನಡ್ಕ ನಿವಾಸಿ ಸತೀಶ್ (46) ಎಂದು ಗುರುತಿಸಲಾಗಿದೆ. ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಪ್ರಗತಿ ಬಸ್ಸಿನ ಚಾಲಕರಾಗಿದ್ದಾರೆ. ಆರೋಪಿಯನ್ನು ಶಂಶಿರ್ ಎಂದು ಗುರುತಿಸಲಾಗಿದ್ದು, ಇವನು ಸಫಾತ್ ಎಂಬ ಹೆಸರಿನ ಬಸ್ಸಿನ ಚಾಲಕನಾಗಿದ್ದು, ಅವರಿಬ್ಬರು ಪರಿಚಿತರಾಗಿದ್ದರು. ದೂರುದಾರರು ಎಸ್.ಸಿ/ಎಸ್.ಟಿ ಸಮುದಾಯಕ್ಕೆ ಸೇರಿದವರೆಂದು ಆರೋಪಿಗೆ ತಿಳಿದಿತ್ತು.

ದಿನಾಂಕ 22-11-2026 ರಂದು ದೂರುದಾರರು ತನ್ನ ಬಾಬ್ತು ಬಸ್ಸನ್ನು ಮುಲ್ಕಿಯಿಂದ ಹೆಜಮಾಡಿಗೆ ತಲುಪುವ ಸಮಯದಲ್ಲಿ 2 ನಿಮಿಷ ತಡವಾಯಿತು ಎಂಬ ಕಾರಣಕ್ಕೆ ಹಿಂದಿನಿಂದ ಸಫಾತ್ ಬಸ್ಸನ್ನು ಚಲಾಯಿಸಿಕೊಂಡು ಬರುತ್ತಿದ್ದ ಆರೋಪಿ ಶಂಶಿರ್ ಕೋಪಗೊಂಡಿದ್ದಾನೆ.

ಕಾಪು ತಾಲೂಕು ತೆಂಕ ಗ್ರಾಮದ ಎರ್ಮಾಳು ಸರಕಾರಿ ಶಾಲೆಯ ಎದುರು ಮಂಗಳೂರು – ಉಡುಪಿ ರಾ.ಹೆ 66 ರಸ್ತೆಯಲ್ಲಿ ಮಧ್ಯಾಹ್ನ ಸುಮಾರು 2:55 ಗಂಟೆಗೆ ದೂರುದಾರರ ಬಸ್ಸಿಗೆ ಆರೋಪಿ ಬಸ್ಸನ್ನು ಅಡ್ಡ ಇಟ್ಟು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿದ್ದಾನೆ. ನಂತರ ದೂರುದಾರರ ಬಳಿಗೆ ಬಂದು ಬಸ್ಸಿನ ಬಾಗಿಲನ್ನು ತೆರೆದು ದೂರುದಾರರ ಬಲಗೈ ಹಾಗೂ ಅಂಗಿ ಕಾಲರ್ ಹಿಡಿದು ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.