ಕುಂದಾಪುರ: ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಊಟದ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಅಪರಿಚಿತ ವ್ಯಕ್ತಿಗಳು ಸೆಳೆದುಕೊಂಡು ಪರಾರಿಯಾದ ಘಟನೆ ನಡೆದಿದೆ.
ದೂರುದಾರರನ್ನು ಕುಂದಾಪುರದ ಹುನ್ಸಮಕ್ಕಿ ಜಡ್ಡು ಗ್ರಾಮದ ಶ್ರೀಮತಿ ಗೀತಾ ಬಿ (51), ಗಂಡ ಕೆ. ಕಾಳಿಂಗ ಕುಲಾಲ್ ಎಂದು ಗುರುತಿಸಲಾಗಿದೆ.
ದಿನಾಂಕ 24-11-2026 ರಂದು ಬೆಳಿಗ್ಗೆ 10:30 ಗಂಟೆಗೆ ಇವರು ತಮ್ಮ ಗಂಡನೊಂದಿಗೆ ಔಷಧ ತರಲು ಕುಂದಾಪುರಕ್ಕೆ ಹೊರಟಿದ್ದರು. ಕೋಟೇಶ್ವರದಲ್ಲಿ ಕೊಡಿ ಹಬ್ಬ ಇರುವುದರಿಂದ ಕೋಟೇಶ್ವರ ಬೈಪಾಸ್ನಲ್ಲಿ ಬಸ್ನಿಂದ ಇಳಿದು ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿದ್ದರು.
ಸುಮಾರು 11:30 ಗಂಟೆಗೆ ದೇವರ ದರ್ಶನ ಮಾಡಿ ಪ್ರದಕ್ಷಿಣೆ ಹಾಕಿ, ಸುಮಾರು ಮಧ್ಯಾಹ್ನ 12:30 ಗಂಟೆಯ ಸುಮಾರಿಗೆ ದೇವಸ್ಥಾನದ ಪೌಳಿಯ ಹೊರ ಭಾಗದಲ್ಲಿ ಜನಜಂಗುಳಿ ಇರುವ ಊಟದ ಸರತಿ ಸಾಲಿನಲ್ಲಿ ನಿಂತುಕೊಂಡಿರುವಾಗ, ಅವರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಯಾರೋ ಅಪರಿಚಿತ ವ್ಯಕ್ತಿಗಳು ಸೆಳೆದುಕೊಂಡು ಹೋಗಿದ್ದಾರೆ.
ಕಳವಾದ ಚಿನ್ನದ ಕರಿಮಣಿ ಸರದ ಒಟ್ಟು ಅಂದಾಜು ಮೌಲ್ಯ ರೂ. 6,00,000 ಆಗಬಹುದಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.



