Home Crime ಕಡಿಮೆ ಬಡ್ಡಿ ದರದಲ್ಲಿ ಗೋಲ್ಡ್ ಲೋನ್ ಆಮಿಷವೊಡ್ಡಿ ವಂಚನೆ : ಐವರ ವಿರುದ್ಧ ಪ್ರಕರಣ ದಾಖಲು…!!

ಕಡಿಮೆ ಬಡ್ಡಿ ದರದಲ್ಲಿ ಗೋಲ್ಡ್ ಲೋನ್ ಆಮಿಷವೊಡ್ಡಿ ವಂಚನೆ : ಐವರ ವಿರುದ್ಧ ಪ್ರಕರಣ ದಾಖಲು…!!

ಗಂಗೊಳ್ಳಿ : ಅತೀ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಅಡಮಾನ ಸಾಲ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಒಟ್ಟು 750.98 ಗ್ರಾಂ ಚಿನ್ನ ಪಡೆದು, ಸಾಲ ಮರುಪಾವತಿಯಾದ ಬಳಿಕವೂ ಅಡಮಾನವಿರಿಸಿದ್ದ ಚಿನ್ನವನ್ನು ಹಿಂತಿರುಗಿಸದೆ ವಂಚಿಸಿರುವ ಆರೋಪದಲ್ಲಿ ಐವರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ಭೀಮಪ್ಪ ಯಲ್ಲಪ್ಪ ಛಲವಾದಿ, ಸುಭಾಷ್ ಖಾರ್ವಿ, ನೇತ್ರಾವತಿ ಖಾರ್ವಿ ಅಲಿಯಾಸ್ ಸ್ವಲಾ ಪಾಲೇಕರ್, ಪ್ರಮೀತಾ ಖಾರ್ವಿ ಹಾಗೂ ಅಕ್ಷಯ ಸಾರಂಗ ಅವರು 2025ರಲ್ಲಿ ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಅಪೇಕ್ಷಾ ಕಾಂಪ್ಲೆಕ್ಸ್‌ನಲ್ಲಿ ‘PBC ಜ್ಯುವೆಲ್ಲರ್ಸ್ ಗೋಲ್ಡ್ ಲೋನ್’ ಎಂಬ ಶಾಖೆಯನ್ನು ತೆರೆದಿದ್ದರು ಎನ್ನಲಾಗಿದೆ.

ಅತೀ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಮೇಲೆ ಸಾಲ ನೀಡುವುದಾಗಿ ಸಾರ್ವಜನಿಕರನ್ನು ನಂಬಿಸಿ, ಅವರಿಂದ ಚಿನ್ನವನ್ನು ಅಡಮಾನವಾಗಿ ಪಡೆದು ಸಾಲ ನೀಡುತ್ತಿದ್ದರು. ಈ ರೀತಿ ತ್ರಾಸಿ ಗ್ರಾಮದ ವೆಂಕಟೇಶ ಪೈ (48) ಸೇರಿದಂತೆ ಹಲವು ಸಾರ್ವಜನಿಕರಿಂದ ಒಟ್ಟು 750.98 ಗ್ರಾಂ ಚಿನ್ನವನ್ನು ಅಡಮಾನವಾಗಿ ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಗ್ರಾಹಕರು ಸಾಲದ ಮೊತ್ತವನ್ನು ಮರುಪಾವತಿಸಿ ತಮ್ಮ ಅಡಮಾನ ಚಿನ್ನವನ್ನು ಹಿಂದಿರುಗಿಸುವಂತೆ ಕೇಳಿದಾಗ, ಆರೋಪಿಗಳು ಸದ್ಯದಲ್ಲೇ ನೀಡುವುದಾಗಿ ಹೇಳಿ ಸತಾಯಿಸುತ್ತಿದ್ದರು. ಆದರೆ, ಈವರೆಗೂ ಚಿನ್ನವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.