ಮಂಗಳೂರು: ಉತ್ತರ ಕರ್ನಾಟಕದ ಪೊಲೀಸರು ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿ ವಿರುದ್ಧ ಆಕ್ಷೇಪಾರ್ಹವಾಗಿ ಮಾತನಾಡಿರುವ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ತಮ್ಮ ಕಾರು ಚಾಲಕ ಅರುಣ್ ಆಳ್ವ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ವಾಕಿಂಗ್ ಮಾಡುತ್ತಿದ್ದ ಅಮಾಯಕ ವ್ಯಕ್ತಿಯೊಬ್ಬರಿಂದ ಹಣ ದೋಚಿದ ಆರೋಪದ ಮೇಲೆ ಮೂವರು ಪೊಲೀಸ್ ಕಾನ್ಸ್ಟೆಬಲ್ಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದ ಕುರಿತು ಅರುಣ್ ಆಳ್ವ ಅವರು ಫೋನ್ನಲ್ಲಿ ಮಾತನಾಡುವ ಸಂದರ್ಭದಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಬಂಧಿತ ಮೂವರು ಕಾನ್ಸ್ಟೆಬಲ್ಗಳು ಈ ಹಿಂದೆಯೂ ಸಂತ್ರಸ್ತ ವ್ಯಕ್ತಿಯಿಂದ ಎರಡು ಬಾರಿ ಹಣ ದೋಚಿದ್ದರು ಎಂಬ ಆರೋಪವಿದೆ. ಈ ಸಂಬಂಧ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮೂವರು ಕಾನ್ಸ್ಟೆಬಲ್ಗಳನ್ನು ಬಂಧಿಸಿದ್ದರು.
ಇದೇ ಪ್ರಕರಣದ ಕುರಿತು ಫೋನ್ ಸಂಭಾಷಣೆ ನಡೆಸುವ ವೇಳೆ ಉತ್ತರ ಕರ್ನಾಟಕದ ಪೊಲೀಸರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವುದಲ್ಲದೆ, ಮಹಿಳಾ ಪೊಲೀಸ್ ಸಿಬ್ಬಂದಿ ಬಗ್ಗೆಯೂ ಆಕ್ಷೇಪಾರ್ಹವಾಗಿ ಮಾತನಾಡಿರುವುದು ವೈರಲ್ ಆಗಿರುವ ಆಡಿಯೋದಲ್ಲಿ ಕೇಳಿಬಂದಿದೆ.
ಈ ಆಡಿಯೋ ಅರುಣ್ ಆಳ್ವ ಅವರದ್ದೇ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ.



