Home Crime ಪರ್ಕಳ: ಮಹಾಲಿಂಗೇಶ್ವರ ದೇವಸ್ಥಾನದ ಬಳಿ ದನ ಕಳ್ಳತನಕ್ಕೆ ವಿಫಲ ಯತ್ನ : ಸಿಸಿಟಿವಿಯಲ್ಲಿ ಕೃತ್ಯ ಸೆರೆ…!!

ಪರ್ಕಳ: ಮಹಾಲಿಂಗೇಶ್ವರ ದೇವಸ್ಥಾನದ ಬಳಿ ದನ ಕಳ್ಳತನಕ್ಕೆ ವಿಫಲ ಯತ್ನ : ಸಿಸಿಟಿವಿಯಲ್ಲಿ ಕೃತ್ಯ ಸೆರೆ…!!

ಮಣಿಪಾಲ: ಉಡುಪಿ ಜಿಲ್ಲೆಯ ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಭಾನುವಾರ (ನ.15) ಮುಂಜಾನೆ ದನ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವ ಘಟನೆ ವರದಿಯಾಗಿದೆ.

ಕಾರಿನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಹತ್ತಿರ ಮಲಗಿದ್ದ ಜಾನುವಾರುಗಳನ್ನು ಕಳವು ಮಾಡಲು ಮುಂದಾಗಿದ್ದರು ಎನ್ನಲಾಗಿದೆ.

ವಾಹನದಿಂದ ಕೆಳಗಿಳಿದು ದನಗಳ ಸಮೀಪಕ್ಕೆ ಬರುತ್ತಿದ್ದ ಆ ಇಬ್ಬರನ್ನು ಗಮನಿಸಿದ ದನಗಳ ಹಿಂಡು ಬೆದರಿ ಏಕಾಏಕಿ ಅಲ್ಲಿಂದ ಓಡಿಹೋಗಿದೆ. ಇದರಿಂದ ಜಾನುವಾರುಗಳು ಕಳ್ಳರ ಕೈಗೆ ಸಿಗದೆ ಬಚಾವ್ ಆಗಿವೆ.

ದನಗಳು ಓಡಿಹೋದ ನಂತರವೂ ಕೆಲಕಾಲ ಸ್ಥಳದಲ್ಲೇ ಕಾದಿದ್ದ ಆ ಅಪರಿಚಿತರು, ಕೊನೆಗೆ ಅಲ್ಲಿಂದ ಕಾರಿನಲ್ಲಿಯೇ ಪರಾರಿಯಾಗಿದ್ದಾರೆ. ಈ ಸಂಪೂರ್ಣ ಕೃತ್ಯದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮುಂಜಾನೆಯ ವೇಳೆ ನಡೆದ ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ದನ ಕಳ್ಳತನಕ್ಕೆ ಯತ್ನಿಸಿದವರನ್ನು ಕೂಡಲೇ ಪತ್ತೆಹಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.