Home Crime ಗಂಗೊಳ್ಳಿ: ಗುಟ್ಕಾ ತರಲು ಹೋದ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ…!!

ಗಂಗೊಳ್ಳಿ: ಗುಟ್ಕಾ ತರಲು ಹೋದ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ…!!

ಗಂಗೊಳ್ಳಿ: ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮೀಪ ಗುಟ್ಕಾ ತರಲು ಅಂಗಡಿಗೆ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡವರನ್ನು ಗುಜ್ಜಾಡಿ ಗ್ರಾಮದ ಉದಯ (35) ಎಂದು ಗುರುತಿಸಲಾಗಿದೆ. ಇವರು ರಾತ್ರಿ 8:30 ಗಂಟೆಗೆ ಗುಜ್ಜಾಡಿ ಗ್ರಾಮದ ನಾಯಕವಾಡಿ-ಸಂಗಮೇಶ್ವರ ರಸ್ತೆಯ ಬಳಿ ಅಂಗಡಿಗೆ ಗುಟ್ಕಾ ತರಲು ಹೋಗುತ್ತಿದ್ದರು.

ಈ ಸಂದರ್ಭದಲ್ಲಿ ಆರೋಪಿಗಳಾದ ರವಿ ಮತ್ತು ಸುರೇಶ್ ಅವರು ಏಕಾಏಕಿ ಮನೆಯಿಂದ ರಸ್ತೆಗೆ ಓಡಿ ಬಂದು, ಇಬ್ಬರ ಕೈಯಲ್ಲಿದ್ದ ಬಟ್ಟೆ ಸುತ್ತಿದ ಕಬ್ಬಿಣದ ರಾಡ್‌ನಿಂದ ದೂರುದಾರರ ತಲೆ ಹಾಗೂ ಕೈ ಕಾಲುಗಳಿಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಲ್ಲೆಯಿಂದ ದೂರುದಾರರ ಬಲ ಕಾಲಿಗೆ, ಮುಂಗಾಲು ಕೆಳಗೆ ರಕ್ತಗಾಯ ಹಾಗೂ ಎಡ ಕೈಗೆ ನೋವುಂಟಾಗಿದ್ದು, ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಗಳಾದ ಸುರೇಶ್ ಮತ್ತು ರವಿ ಅವರು ದೂರುದಾರರ ಮನೆಯ ಬಳಿ ಬಂದು ಪದೇ ಪದೇ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದೂ ದೂರಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ನಡೆಸುತ್ತಿದ್ದಾರೆ.