ನವದೆಹಲಿ / ಉಡುಪಿ: ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕರ್ನಾಟಕದ ಮಾಜಿ ಸಚಿವ, ಉಡುಪಿಯ ಹಿರಿಯ ನಾಯಕ ಪ್ರಮೋದ್ ಮಧ್ವರಾಜ್ ಅವರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿರ್ದೇಶನದ ಮೇರೆಗೆ, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅಮರ್ ಪಾಲ್ ಮೌರ್ಯ ಅವರು ಶನಿವಾರ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಈ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.
ಪ್ರಮೋದ್ ಮಧ್ವರಾಜ್ ಅವರ ಜೊತೆಗೆ ದೆಹಲಿಯ ಗಜೇಂದ್ರ ಯಾದವ್ ಹಾಗೂ ಛತ್ತೀಸ್‌ಗಢದ ಲಲಿತ್ ಚಂದ್ರಕರ್ ಅವರನ್ನು ಸಹ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.
ಈ ನೇಮಕದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಮೋದ್ ಮಧ್ವರಾಜ್, ಪಕ್ಷದ ಹೈಕಮಾಂಡ್, ರಾಜ್ಯ ಮುಖಂಡರ ಶಿಫಾರಸಿನ ಮೇರೆಗೆ ಈ ಮಹತ್ತರ ಜವಾಬ್ದಾರಿ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅಮರ್ ಪಾಲ್ ಮೌರ್ಯ ಅವರ ಸಲಹೆ-ಸೂಚನೆಯಂತೆ ಕಾರ್ಯ ನಿರ್ವಹಿಸುತ್ತೇನೆ. ದೇವರು ಕೊಟ್ಟ ಶಕ್ತಿಯಲ್ಲಿ ಒಬಿಸಿ ಮೋರ್ಚಾದ ಉನ್ನತಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಪ್ರಮೋದ್ ಮಧ್ವರಾಜ್ ಅವರ ನೇಮಕಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಅನೇಕ ನಾಯಕರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.



