Home Crime ಹಣಕ್ಕಾಗಿ ಸ್ನೇಹಿತನನ್ನೇ ಕೊಲೆಗೈದ ಪ್ರಕರಣ : ಆರೋಪಿ ಅರೆಸ್ಟ್…!!

ಹಣಕ್ಕಾಗಿ ಸ್ನೇಹಿತನನ್ನೇ ಕೊಲೆಗೈದ ಪ್ರಕರಣ : ಆರೋಪಿ ಅರೆಸ್ಟ್…!!

ಮಂಗಳೂರು : ಹಣಕ್ಕಾಗಿ ತನ್ನ ಸ್ನೇಹಿತನನ್ನೇ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಖುಷ್‌ನಗರದ ಶ್ರವಣ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಟಾಚಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಈತ ತನ್ನದೇ ಊರಿನ ಮನೀಶ್ ಶರ್ಮಾ (25) ಎಂಬಾತನನ್ನು ಅ.27ರಂದು ಕೊಲೆ ಮಾಡಿ ಬಳಿಕ ಊರಿಗೆ ಪರಾರಿಯಾಗಿದ್ದ ಎನ್ನಲಾಗಿದೆ. ಹಣಕ್ಕಾಗಿ ಶ್ರವಣ್ ತನ್ನ ಸ್ನೇಹಿತ ಮನೀಶ್‌ನನ್ನು ಊಟದ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ನ.13ರಂದು ಮನೀಶ್‌ನ ಮೃತದೇಹದ ಅಸ್ಥಿಪಂಜರವು ಹಳೆಯ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು. ಇದೊಂದು ವ್ಯವಸ್ಥಿತ ಕೊಲೆ ಎಂದು ಶಂಕಿಸಿ ಮೃತನ ಸಹೋದರ ಸೋನು ಶರ್ಮಾ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಅದರಂತೆ ತನಿಖೆ ನಡೆಸಿದ ಬಜ್ಪೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

ಮನೀಶ್ ಮತ್ತು ಶ್ರವಣ್ ಸೋಮಸುಂದರ್ ಎಂಬವರ ಬಳಿ ಹಿಟಾಚಿ ಚಾಲಕರಾಗಿ ದುಡಿಯುತ್ತಿದ್ದರು. ಅಲ್ಲದೆ ಬಾಡಿಗೆಯ ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸೋನು ಅ.27ರಂದು ಹಲವು ಬಾರಿ ತನ್ನ ಸಹೋದರ ಮನಿಶ್‌ಗೆ ಕರೆ ಮಾಡಿದ್ದ. ಆದರೆ ಮೊಬೈಲ್ ಸ್ವಿಚ್‌ಆಫ್ ಎಂಬ ಸೂಚನೆ ಬರುತ್ತಿತ್ತು. ಆ ದಿನ ರಾತ್ರಿ ಹಿಟಾಚಿ ಮಾಲಕ ಸೋಮಸುಂದರ್ ಬೆಂಗಳೂರಿನಲ್ಲಿರುವ ಸೋನುವಿಗೆ ಕರೆ ಮಾಡಿ ಮನೀಶ್ ಇಂದು ಸಂಜೆ ಶ್ರವಣ್ ಜೊತೆ ಹೊರಗಡೆ ಹೋದವ ಮರಳಿ ಬಂದಿಲ್ಲ. ಕರೆಗೂ ಸಿಗುತ್ತಿಲ್ಲ ಎಂದು ತಿಳಿಸಿದ್ದರು. ಅ.30ರಂದು ಸೋನು ಬಜ್ಪೆಗೆ ಆಗಮಿಸಿ ಮನೀಶ್ ಉಳಿದುಕೊಂಡಿದ್ದ ರೂಮ್‌ಗೆ ತೆರಳಿ ಬಿಹಾರ ಮೂಲದ ಬೈಜುಲಾಲ್ ಎಂಬಾತನಲ್ಲಿ ತನ್ನ ಸಹೋದರನ ಬಳಿ ವಿಚಾರಿಸಿದ. ಅ.27ರಂದು ಸಂಜೆ ಶ್ರವಣ್ ಮತ್ತು ಮನೀಶ್ ಊಟಕ್ಕೆ ಹೋಗಿದ್ದು, ವಾಪಸ್ ಶ್ರವಣ್ ಮಾತ್ರ ಬಂದಿರುವುದಾಗಿ ಬೈಜುಲಾಲ್ ತಿಳಿಸಿದ. ಅದರಂತೆ ಶ್ರವಣ್ ಬಳಿ ಮನೀಶ್ ಬಗ್ಗೆ ಕೇಳಿದಾಗ ಆತ ಊರಿಗೆ ಹೋಗಿರುವುದಾಗಿ ತಿಳಿಸಿದ. ಇದರಿಂದ ಸಂಶಯಗೊಂಡ ಸೋನು ನ.1ರಂದು ಬಜ್ಪೆ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಮನೀಶ್‌ನ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದಾಗ ಅ.27ರಂದು ರಾಜನ್ ಎಂಬವರಿಗೆ 63,720 ರೂ. ವರ್ಗಾವಣೆ ಆಗಿದ್ದು, ಅವರಿಂದ ಶ್ರವಣ್ ಖಾತೆಗೆ ಹೋಗಿರುವುದು ತಿಳಿದು ಬಂದಿತ್ತು. ನ.13ರಂದು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಮನುಷ್ಯ ದೇಹದ ಮೂಳೆಯ ತುಂಡುಗಳು, ತಲೆ ಬುರುಡೆಯ ಚೂರುಗಳು ಕಂಡು ಬಂದಿದ್ದು, ಪಕ್ಕದಲ್ಲಿ ಶರ್ಟ್ ಮತ್ತು ಪ್ಯಾಂಟ್ ಲಭಿಸಿತ್ತು. ಅದು ಮನೀಶ್‌ನದ್ದೇ ಎಂದು ಸ್ಪಷ್ಟವಾಗಿದ್ದವು.

ಪೊಲೀಸರು ತನಿಖೆ ತೀವ್ರಗೊಳಿಸಿದಾಗ ತಾನು ಊರಲ್ಲಿ ಸಾಲ ಮಾಡಿಕೊಂಡಿದ್ದೆ. ಇಎಂಐ ಕಟ್ಟಲು ಹಣದ ಅವಶ್ಯಕತೆ ಇತ್ತು. ಅದಕ್ಕಾಗಿ ಸ್ನೇಹಿತನ ಹಣ ಲಪಟಾಯಿಸಲು ಊಟದ ನೆಪದಲ್ಲಿ ಕರೆದೊಯ್ದು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ಊರಿಗೆ ಪರಾರಿಯಾಗಿರುವುದಾಗಿ ಆರೋಪಿ ಶ್ರವಣ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.