ಬೈಂದೂರು: ಹಣವನ್ನು ಪಣವಾಗಿಟ್ಟು ಗರ್ ಗರ್ ಮಂಡಲ್ ಜುಗಾರಿ ಆಡುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದ ಘಟನೆ ಅ. 28ರಂದು ತಡರಾತ್ರಿ ನಡೆದಿದೆ.
ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಕುಮಾರ್ ಬಿ.ವೈ. ಅವರಿಗೆ ಬಿಜೂರು ಗ್ರಾಮದ ಅರೆಕಲ್ಲು ವಠಾರದಲ್ಲಿರುವ ಶ್ರೀಧರ್ ಅವರ ಸಿಮೆಂಟ್ ಮತ್ತು ಕಿಟಕಿ ತಯಾರಿಕಾ ಶೆಡ್ ಎದುರಿನ ಖಾಲಿ ಸ್ಥಳದಲ್ಲಿ ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.
ಈ ಮಾಹಿತಿಯ ಮೇರೆಗೆ ಪೊಲೀಸರು ಠಾಣಾ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ, ಜುಗಾರಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ನಡೆಸಿದರು. ಈ ವೇಳೆ ಕೆಲವರು ಕತ್ತಲಿನಲ್ಲಿ ಪರಾರಿಯಾಗಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ವೇಳೆ ಸತೀಶ್, ಪ್ರವೀಣ್, ಅಮಿತ್ ಸೇರಿದಂತೆ ಇತರರು ಆಟದಲ್ಲಿ ಭಾಗಿಯಾಗಿರುವುದಾಗಿ ತಿಳಿದುಬಂದಿದೆ ಎನ್ನಲಾಗಿದೆ. ಅವರಿಗೆ ತನಿಖೆಗೆ ಹಾಜರಾಗುವಂತೆ BNSS ಕಲಂ 35(3)ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ.
ಜುಗಾರಿ ಆಟಕ್ಕೆ ಬಳಸಿದ್ದ ಗರ್ ಗರ್ ಮಂಡಲ್ ಚಿತ್ರದ ಪ್ಲಾಸ್ಟಿಕ್ ಶೀಟ್, 25 ಮರದ ದಾಳಗಳು, ಪ್ಲಾಸ್ಟಿಕ್ ಡಬ್ಬಿ, ಎರಡು ಉರಿಯುತ್ತಿದ್ದ ಮೇಣದಬತ್ತಿಗಳು, 620 ರೂಪಾಯಿ ನಗದು, ಚಾವಿ ಕಂಪನಿಯ ಬೆಂಕಿಪೊಟ್ಟಣ, ಒಂದು ಒಪ್ಪೋ ಮೊಬೈಲ್ ಫೋನ್ ಹಾಗೂ ಆರು ಮೋಟಾರ್ ಸೈಕಲ್ಗಳನ್ನು ಪೊಲೀಸರು ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ.ಮುಂದಿನ ತನಿಖೆ ನಡೆಯುತ್ತಿದೆ.



