Home Crime ಭೂಗತ ಪಾತಕಿ ಹೇಮಂತ್ ಪೂಜಾರಿ ಅರೆಸ್ಟ್…!!

ಭೂಗತ ಪಾತಕಿ ಹೇಮಂತ್ ಪೂಜಾರಿ ಅರೆಸ್ಟ್…!!

ನವದೆಹಲಿ: ಉಡುಪಿ ಜಿಲ್ಲೆಯ ಉದ್ಯಮಿಗಳಿಗೆ ಅಂತರರಾಷ್ಟ್ರೀಯ ದೂರವಾಣಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೆ, ಹಣ ನೀಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ಹೇಮಂತ್ ಪೂಜಾರಿಯನ್ನು ಬರ್ಮಾದ ಮ್ಯಾನ್ಮಾರ್ ನಲ್ಲಿ  ಅಂತರರಾಷ್ಟ್ರೀಯ ಗುಪ್ತಚರ ಸಂಸ್ಥೆ ‘ರಾ’ (RAW) ನೆರವಿನೊಂದಿಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಹೇಮಂತ್ ಪೂಜಾರಿ ಅಲಿಯಾಸ್ ‘ಎಚ್.ಪಿ.’ ಉಡುಪಿ ಜಿಲ್ಲೆಯ 17ಕ್ಕೂ ಅಧಿಕ ಬಿಲ್ಡರ್‌ಗಳು, ಹೋಟೆಲ್ ಉದ್ಯಮಿಗಳು, ಸಿವಿಲ್ ಗುತ್ತಿಗೆದಾರರು, ರಾಜಕಾರಣಿಗಳು ಹಾಗೂ ದೊಡ್ಡ ಕಂಪೆನಿಗಳ ಮುಖ್ಯಸ್ಥರಿಗೆ ಅಂತರರಾಷ್ಟ್ರೀಯ ಮೊಬೈಲ್ ಕರೆ ಮಾಡಿ ಹಣಕ್ಕಾಗಿ ಒತ್ತಾಯಿಸುತ್ತಿದ್ದ. ಹಣ ನೀಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂಬ ದೂರುಗಳು ಪೊಲೀಸರಿಗೆ ಬಂದಿದ್ದವು.

ಈ ನಡುವೆ ಕಳೆದ ಸೆಪ್ಟೆಂಬರ್‌ನಲ್ಲಿ ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಹೇಮಂತ್ ಪೂಜಾರಿಯ ಸಹಚರರು ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದು, ಹೇಮಂತ್ ಪೂಜಾರಿಯನ್ನು 11ನೇ ಆರೋಪಿಯನ್ನಾಗಿ ಹೆಸರಿಸಿ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಹೇಮಂತ್ ಪೂಜಾರಿ ವಿರುದ್ಧ ಶಿರ್ವ, ಪಡುಬಿದ್ರಿ, ಕಾಪು ಹಾಗೂ ಮಣಿಪಾಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದವು.

ಸ್ಥಳೀಯ ಉದ್ಯಮಿಗಳ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ಹೇಮಂತ್ ಪೂಜಾರಿಗೆ ಒದಗಿಸುತ್ತಿದ್ದ ಆರೋಪದ ಮೇಲೆ ಎರ್ಮಾಳು ಬಡಾ ನಿವಾಸಿ ಸುರೇಶ್ ಅಮೀನ್ (38) ಮತ್ತು ಸಾಂತೂರಿನ ಹರೀಶ್ ಪೂಜಾರಿ (45) ಎಂಬುವವರನ್ನು ಪೊಲೀಸರು ಬಂಧಿಸಿದ್ದರು.

ತನ್ನ ಸಹಚರರ ಬಂಧನಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳ ಕುಟುಂಬದವರಿಗೂ ಹೇಮಂತ್ ಪೂಜಾರಿ ಬೆದರಿಕೆ ಹಾಕಿದ್ದ ಎಂಬ ಆರೋಪವೂ ಕೇಳಿಬಂದಿತ್ತು.

ಈ ನಡುವೆ ಬೆದರಿಕೆ ಎದುರಿಸಿದ್ದ ಉದ್ಯಮಿಯೊಬ್ಬರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಪ್ತ ವಲಯಕ್ಕೆ ಸಂಪರ್ಕ ಹೊಂದಿರುವ ಉದ್ಯಮಿಯ ಮೂಲಕ ಪ್ರಭಾವ ಬೀರಿ ಹೇಮಂತ್ ಪೂಜಾರಿಯನ್ನು ಪತ್ತೆಹಚ್ಚುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಅಂತರರಾಷ್ಟ್ರೀಯ ಗುಪ್ತಚರ ಸಂಸ್ಥೆ ‘ರಾ’ (RAW) ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ಹೇಮಂತ್ ಪೂಜಾರಿ ಮಲೇಷ್ಯಾ ಹಾಗೂ ಬರ್ಮಾದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ.

ಗುಪ್ತಚರ ಇಲಾಖೆಯ ಅಧಿಕಾರಿಗಳು ಹೇಮಂತ್ ಪೂಜಾರಿಯನ್ನು ಬಂಧಿಸಿ ದೆಹಲಿಗೆ ಇಂದು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ. ಕಳೆದ ಎರಡು ದಿನಗಳಿಂದ ಹೇಮಂತ್ ಪೂಜಾರಿ ಬಂಧನದ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿತ್ತು. ಆದರೆ ಅಧಿಕಾರಿಗಳು ಅಧಿಕೃತವಾಗಿ ಈ ವಿಚಾರ ಎಲ್ಲೂ ಬಹಿರಂಗ ಪಡಿಸಿಲ್ಲ.

ಭೂಗತ ಪಾತಕಿ ಹೇಮಂತ್ ಪೂಜಾರಿ ಕೆಲವು ವರ್ಷಗಳ ಹಿಂದೆ ಛೋಟಾ ರಾಜನ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ. ಹೇಮಂತ್ ಪೂಜಾರಿ ಮೊದಲು ಮುಂಬಯಿಯ ಖಾರ್ ನಲ್ಲಿ “ಆಡು” ಎಂಬ ಡಾನ್ ನನ್ನು ಕೊಲೆ ಮಾಡಿ ಜೈಲು ಪಾಲು ಆಗಿದ್ದ,ಅಲ್ಲಿ ಶೂಟರ್ ರೋಹಿತ್ ವರ್ಮಾನ ಪರಿಚಯವಾಗಿ ಛೋಟಾ ರಾಜನ್ ಗ್ಯಾಂಗ್ ಸೇರಿದ. ನಂತರ ಯಾವುದೋ ವಿಷಯದಲ್ಲಿ ವೈಷಮ್ಯ ‌ಉಂಟಾಗಿ ಪೂಜಾರಿ ತನ್ನದೇ ಸ್ವಂತ ಗ್ಯಾಂಗ್ ಮಾಡಿದ. ಮುಂಬಯಿಯ ಉದ್ಯಮಿ ರತ್ನಾಕರ್ ಶೆಟ್ಟಿ ಹಾಗೂ  ಹೆಸರಾಂತ ಉದ್ಯಮಿ ಬಂಟಕಲ್ಲು ಜಯ ಶೆಟ್ಟಿಯನ್ನು ಹೇಮಂತ್ ಪೂಜಾರಿ ಹತ್ಯೆ ಮಾಡಿದ.ಆನಂತರ ಕೆಲವು ಕೊಲೆಗಳನ್ನು ಮಾಡಿ, ಹೆಸರು ಮಾಡಿ ಮುಂಬಯಿ, ಮಂಗಳೂರು , ಉಡುಪಿ ಉದ್ಯಮಿಗಳ‌ ಬಳಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಕೆಲವು ವರ್ಷಗಳ ಬಳಿಕ ದುಬೈನಲ್ಲಿ ಕಾರು‌ ಅಪಘಾತದಲ್ಲಿ ಹೇಮಂತ್ ಪೂಜಾರಿ ಗಾಯಗೊಂಡಿದ್ದ. ನಂತರ ಕೇರಳದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇದನ್ನು ಮುಂಬಯಿ ಪೊಲೀಸರು ನೋಡಿ ಆತ ಸ್ವಲ್ಪ ಸಮಯದಲ್ಲಿ ಸಾಯುತ್ತಾನೆ ಎಂದು ಭಾವಿಸಿ ಬಿಟ್ಟು ಹೋಗಿದ್ದರು.

ಆದರೆ ಇಪ್ಪತ್ತು ವರ್ಷದ ನಂತರ ಹೇಮಂತ್ ಪೂಜಾರಿ ಇದ್ದಾನೆ. ಆರೋಗ್ಯವನ್ನು ಚೇತರಿಸಿಕೊಂಡು, ಪುನಃ ಉಡುಪಿ ಜಿಲ್ಲೆಯ ಡೇವಿಡ್ ನನ್ನು ಹತ್ಯೆ ನಡೆಸಿ, ಉದ್ಯಮಿಗಳನ್ನು ಬೆದರಿಸಲು ಹೊರಟ. ಆದರೆ ಆತ ಭಾರತದ ಹೆಸರಾಂತ ಉದ್ಯಮಿಯ ಸಂಸ್ಥೆಗೆ ಹೆದರಿಸಲು ಹೊರಟ.ಅದೇ ಅವನ ಪಾಲಿಗೆ ಮುಳುವಾಯಿತೇ..?