ಪುತ್ತೂರು, ಅ. 15: ಕರ್ನಾಟಕದಲ್ಲಿ ನಿಷೇಧಿತವಾಗಿರುವ ಕೇರಳ ರಾಜ್ಯದ ಲಾಟರಿ ಟಿಕೆಟ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮೊದಲ ಪ್ರಕರಣ:
ಅ.14 ರಂದು ಸಂಜೆ ಪುತ್ತೂರು ಕಸಬ ಗ್ರಾಮದ ಮುಖ್ಯ ರಸ್ತೆಯ ಅಂಗಡಿಯಲ್ಲಿ ಅಕ್ರಮ ಲಾಟರಿ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಸಹಾಯಕ ಪಿಎಸ್ಐ ವಾಸು ನಾಯ್ಕ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ. ಅಂಗಡಿ ಮಾಲೀಕ ಪುತ್ತೂರು ಕಸಬ ನಿವಾಸಿ ಶ್ರೀನಿವಾಸ ಪೈ (33) ಕೇರಳ ಲಾಟರಿಯನ್ನು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಟಿಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅ.ಕ್ರ: 124/2026 ಕಲಂ 7(iii) ಲಾಟರಿ ನಿಷೇಧ ಕಾಯ್ದೆ 1998 ರಂತೆ ಪ್ರಕರಣ ದಾಖಲು.
ಎರಡನೇ ಪ್ರಕರಣ:
ಅದೇ ದಿನ ಸಂಜೆ 5 ಗಂಟೆಗೆ ಪುತ್ತೂರು ಕಸಬ ಗ್ರಾಮದ ಲಿನೆಟ್ ಜಂಕ್ಷನ್ ಬಳಿ ಪಾನ್ ಸ್ಟಾಲ್ ಅಂಗಡಿಯಲ್ಲಿ ಲಕ್ಷ್ಮಣ (42) ಅಕ್ರಮ ಲಾಟರಿ ಮಾರಾಟ ಮಾಡುತ್ತಿರುವ ಮಾಹಿತಿ ಬಂದಿದ್ದು, ಸಹಾಯಕ ಪಿಎಸ್ಐ ಗಂಗಾಧರ ಎ.ಬಿ ದಾಳಿ ನಡೆಸಿದ್ದಾರೆ.
ಲಕ್ಷ್ಮಣ ಕೇರಳದ ಮುಳ್ಳೇರಿಯಾದ ಧನುಶ್ ಎಂಬವರಿಂದ ಲಾಟರಿ ಟಿಕೆಟ್ ತಂದು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಯಾವುದೇ ಪರವಾನಿಗೆ ಇಲ್ಲದೆ ನಿಷೇಧಿತ ಲಾಟರಿ ಮಾರಾಟ ಮಾಡಿದ್ದಕ್ಕಾಗಿ ಲಕ್ಷ್ಮಣ ಮತ್ತು ಟಿಕೆಟ್ ಪೂರೈಸಿದ ಧನುಶ್ ವಿರುದ್ಧ ಅ.ಕ್ರ: 125/2026 ಕಲಂ 7(iii) ಲಾಟರಿ ನಿಷೇಧ ಕಾಯ್ದೆ 1998 ರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.



