Home Latest ಉಡುಪಿಯಲ್ಲಿ ಕರ್ನಾಟಕ ರಾಜ್ಯೋತ್ಸವ : ಗೌರವ ರಕ್ಷೆ ಸ್ವೀಕರಿಸಿದ ರಿಜ್ವಾನ್‌ ಅರ್ಷದ್, ಕಡಲ ಜೈವಿಕ ತಂತ್ರಜ್ಞಾನ...

ಉಡುಪಿಯಲ್ಲಿ ಕರ್ನಾಟಕ ರಾಜ್ಯೋತ್ಸವ : ಗೌರವ ರಕ್ಷೆ ಸ್ವೀಕರಿಸಿದ ರಿಜ್ವಾನ್‌ ಅರ್ಷದ್, ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ…!!

ಉಡುಪಿ: ಕಡಲು ನಮ್ಮ ನಿಜವಾದ ಮತ್ತು ಅತಿದೊಡ್ಡದಾದ ಸಂಪತ್ತು. ಈ ಸಂಪತ್ತಿನ ಸದ್ಬಳಿಕೆಗಾಗಿ ರಾಜ್ಯ ಸರ್ಕಾರ ಕರ್ನಾಟಕ ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ ನೀಡಿದೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಅವರು ಜಿಲ್ಲಾಡಳಿತ ಉಡುಪಿ ಜಿಲ್ಲೆ ವತಿಯಿಂದ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು (ನ.01-ಭಾನುವಾರ) ನಡೆದ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

ಜೈವಿಕ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಸರ್ಕಾರಿ ಮೀನುಗಾರಿಕಾ ಕಾಲೇಜಿನಲ್ಲಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆರೈನ್ ಟೆಕ್ನಾಲಜಿ ಆ್ಯಂಡ್ ಬ್ಲೂ ಎಕನಾಮಿ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆಯನ್ನು 60 ರಿಂದ 200 ಕ್ಕೆ ಏರಿಸಲು ಕ್ರಮ ವಹಿಸಲಾಗಿದೆ ಎಂದರು.

ಉಡುಪಿಯನ್ನು ಅಭಿವೃದ್ಧಿಯ ಆಕಾಶಕ್ಕೆ ಏರಿಸಬೇಕೆಂಬುದು ನಮ್ಮ ಆಶಯ. ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ಒದಗಿಸಲು ಯೋಜಿಸಲಾಗಿದೆ. ತ್ರಾಸಿ ಮತ್ತು ಮರವಂತೆ ಬೀಚ್‌ನಲ್ಲಿ ಲಭ್ಯವಿರುವ 7.07 ಎಕರೆ ಭೂಮಿಯನ್ನು ಬಳಸಿಕೊಂಡು 48 ಕೋಟಿ ರೂ. ವೆಚ್ಚದೊಂದಿಗೆ ರೆಸಾರ್ಟ್ ಹಾಗೂ ವಿವಿಧ ಮನೋರಂಜನಾ ಪಾರ್ಕ್ ಹಾಗೂ ಕ್ರೀಡಾ ಚಟುವಟಿಕೆಗಳನ್ನು ರೂಪಿಸಲು ಮತ್ತು ಉತ್ತೇಜನ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವರ ರಿಜ್ವಾನ್ ಅರ್ಷದ್ ತಿಳಿಸಿದರು.

ತುಳುನಾಡು ಸಂಸ್ಕೃತಿಯ ದೊಡ್ಡ ಭಾಗವಾಗಿದ್ದರೂ ಇಲ್ಲಿ ಕನ್ನಡದ ಮಹಾನ್ ಪರಂಪರೆಗೆ ಉಡುಪಿ ಅಪಾರ ಕೊಡುಗೆ ನೀಡಿದೆ. ಇಂತಹ ಭವ್ಯ ಪರಂಪರೆಯ ನೆಲದಲ್ಲಿ ಜನರ ನಡುವೆ ವಿಷ ಬೆರೆಸುವ ಪ್ರಯತ್ನಗಳು ನಡೆಯುತ್ತಿದೆ. ಇದು ಅತ್ಯಂತ‌ ನೋವಿನ ಹಾಗೂ ಬೇಸರದ ಸಂಗತಿ. ಈ ಬಗ್ಗೆ ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು. ಇದು ಇಂದಿನ ಬಹುದೊಡ್ಡ ಜವಾಬ್ದಾರಿ. ಇಲ್ಲಿ ನಾವೆಲ್ಲರೂ ಭಾರತೀಯರು, ಕನ್ನಡಿಗರು ಎನ್ನುವುದು ಮುಖ್ಯವೇ ಹೊರತು ಜಾತಿ, ಮತ, ಪಂಥಗಳಲ್ಲ ಎನ್ನುವುದನ್ನು ನೆನಪಿನಲ್ಲಿ ಇಡಬೇಕು. ಈ ಬಗ್ಗೆ ಪ್ರಜ್ಞಾವಂತ ಸಮುದಾಯಕ್ಕೆ ನಾನು ಹೆಚ್ಚು ಹೇಳುವುದಿಲ್ಲ ಎಂದರು.

ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನವನ್ನು ಪರಿಚಯಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಗ್ರಾಮಾನುಭವ ಯೋಜನೆಗೆ ಸಚಿವರು ಚಾಲನೆ ನೀಡಿದರು. ನಗರ ಪ್ರದೇಶದ ಶಾಲಾ ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಕಲೆ ಮತ್ತು ಸಂಸ್ಕೃತಿಯ ಅಂಶಗಳನ್ನು ಒಳಗೊಂಡಂತೆ ವಿಶಿಷ್ಟ ಗ್ರಾಮೀಣ ಜೀವನ ಪರಿಚಯಾತ್ಮಕ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮವನ್ನು 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದರು.

ಕೇಂದ್ರ ಸರ್ಕಾರದ ನಿಯಮಾನುಸಾರ ಉಡುಪಿ ಜಿಲ್ಲೆಯು ಶೇ.95.53 ಸಾಕ್ಷರತೆ ಪ್ರಮಾಣವನ್ನು ಸಾಧಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಮೊದಲ ಸಾಕ್ಷರತಾ ಜಿಲ್ಲೆಯಾಗಿ ಉಡುಪಿ ಹೊರಹೊಮ್ಮಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್‌ ಅರ್ಷದ್ ಅವರು ಸಂಪೂರ್ಣ ಸಾಕ್ಷರತಾ ಜಿಲ್ಲೆಯೆಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಬೋರ್ಡ್‌ ಹೈಸ್ಕೂಲ್‌ನಲ್ಲಿ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಸಚಿವ ಚಾಲನೆ ನೀಡಿದರು. ಅಲ್ಲಿಂದ ಕೆಎಂ ಮಾರ್ಗ, ಕೋರ್ಟ್ ರೋಡ್, ಜೋಡುಕಟ್ಟೆ ಮಾರ್ಗವಾಗಿ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ತಲುಪಿತು.