ಉಡುಪಿ: ವಿಶ್ವ ಮಧುಮೇಹ ದಿನದ ಅಂಗವಾಗಿ ಉಡುಪಿಯ ಆದರ್ಶ ಆಸ್ಪತ್ರೆಯ ವತಿಯಿಂದ ಸಾರ್ವಜನಿಕರ ಆರೋಗ್ಯ ಜಾಗೃತಿ ಹಾಗೂ ಮಧುಮೇಹ ನಿಯಂತ್ರಣದ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು.
ಶಿಬಿರದ ಮೂಲಕ ಮಧುಮೇಹದ ಆರಂಭಿಕ ಪತ್ತೆ, ನಿಯಮಿತ ಆರೋಗ್ಯ ತಪಾಸಣೆ ಹಾಗೂ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.
ಭಾರತದಲ್ಲಿ ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಅನೇಕ ಮಂದಿಗೆ ತಮಗೆ ಮಧುಮೇಹವಿರುವುದೇ ತಿಳಿದಿಲ್ಲ. ಆದ್ದರಿಂದ ಮುನ್ನೆಚ್ಚರಿಕೆ ಹಾಗೂ ನಿಯಮಿತ ಆರೋಗ್ಯ ತಪಾಸಣೆ ಅತ್ಯಂತ ಅಗತ್ಯ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ನ.15ರಂದು ವಿಶ್ವ ಮಧುಮೇಹ ದಿನದ ಅಂಗವಾಗಿ ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಆಯೋಜಿಸಲಾದ ಉಚಿತ ಮಧುಮೇಹ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ವಾಹನಗಳ ನಿರ್ವಹಣೆಗೆ ನಾವು ಹೆಚ್ಚಿನ ಗಮನ ನೀಡುತ್ತೇವೆ. ಆದರೆ ನಮ್ಮ ದೇಹದ ಆರೋಗ್ಯದ ಬಗ್ಗೆ ಅಷ್ಟೇ ಕಾಳಜಿ ವಹಿಸುವುದಿಲ್ಲ. ವಾಹನಗಳಿಗೆ ಕಾಲಕಾಲಕ್ಕೆ ಸರ್ವಿಸ್ ಮಾಡಿಸುವಂತೆ ದೇಹದ ಆರೋಗ್ಯವನ್ನೂ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಆದರ್ಶ ಆಸ್ಪತ್ರೆಯು ಉಚಿತ ಆರೋಗ್ಯ ಶಿಬಿರದ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ. ಎಸ್. ಚಂದ್ರಶೇಖರ್ ಮಾತನಾಡಿ, ಬೊಜ್ಜು ಮತ್ತು ಮಧುಮೇಹ ಒಂದಕ್ಕೊಂದು ಸಂಬಂಧ ಹೊಂದಿವೆ. ದೇಶದಲ್ಲಿ 13 ಕೋಟಿಗೂ ಅಧಿಕ ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಮತ್ತಷ್ಟು ಮಂದಿ ಪ್ರಿ-ಡಯಾಬಿಟಿಸ್ ಹಂತದಲ್ಲಿದ್ದಾರೆ. ನಿಯಂತ್ರಣವಿಲ್ಲದ ಮಧುಮೇಹದಿಂದ ಕಣ್ಣು, ಮೂತ್ರಪಿಂಡ ಸೇರಿದಂತೆ ದೇಹದ ಹಲವು ಅಂಗಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದರು.
ಮಧುಮೇಹಿಗಳು ವರ್ಷಕ್ಕೆ ಕನಿಷ್ಠ ಎರಡು ಬಾರಿ ಮೂತ್ರ ಪರೀಕ್ಷೆ ಮಾಡಿಸಿ, ಮೂತ್ರದಲ್ಲಿನ ಪ್ರೋಟೀನ್ ಪ್ರಮಾಣವನ್ನು ಪರಿಶೀಲಿಸಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟ, ಕ್ರಿಯಾಟಿನಿನ್ ಹಾಗೂ ದೇಹದ ತೂಕದ ಬಗ್ಗೆ ನಿಗಾ ವಹಿಸಬೇಕು. ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ ಮತ್ತು ವೈದ್ಯರ ಸಲಹೆಯಂತೆ ಔಷಧೋಪಚಾರ ಪಾಲಿಸುವುದು ಮುಖ್ಯ ಎಂದು ತಿಳಿಸಿದರು.
ಅಸೋಸಿಯೇಷನ್ ಆಫ್ ಫಿಸಿಷಿಯನ್ಸ್ ಆಫ್ ಇಂಡಿಯಾ ಉಡುಪಿ-ಮಣಿಪಾಲ ಘಟಕದ ಅಧ್ಯಕ್ಷ ಡಾ. ಮುಖ್ಯಪ್ರಾಣ ಪ್ರಭು ಮಾತನಾಡಿ, ಮಧುಮೇಹ ಪತ್ತೆಯಾದಾಗ ಆತಂಕಪಡುವ ಬದಲು ಸೂಕ್ತ ಔಷಧೋಪಚಾರ ಮತ್ತು ನಿಯಮಿತ ವೈದ್ಯಕೀಯ ತಪಾಸಣೆಯೊಂದಿಗೆ ಆರೋಗ್ಯಕರ ಜೀವನ ನಡೆಸಬೇಕು ಎಂದರು.
ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಅನುಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ಡಿ.ಕೆ. ವಂದಿಸಿದರು.
ನ.16ರಿಂದ 30ರವರೆಗೆ ರಿಯಾಯಿತಿ ದರದಲ್ಲಿ ಮಧುಮೇಹ ತಪಾಸಣೆ:
ಆದರ್ಶ ಆಸ್ಪತ್ರೆಯು ನ.16ರಿಂದ ನ.30ರವರೆಗೆ ಸಮಗ್ರ ಮಧುಮೇಹ ಆರೋಗ್ಯ ತಪಾಸಣಾ ಪ್ಯಾಕೇಜ್ ಅನ್ನು ₹2,200ರ ರಿಯಾಯಿತಿ ದರದಲ್ಲಿ ಒದಗಿಸುತ್ತಿದೆ. ಇದರಲ್ಲಿ ಸಿಬಿಸಿ, ಮೂತ್ರ ಪರೀಕ್ಷೆ, ಲಿಪಿಡ್ ಪ್ರೊಫೈಲ್, ಎಫ್ಬಿಎಸ್ ಮತ್ತು ಪಿಪಿಬಿಎಸ್, ಕ್ರಿಯಾಟಿನಿನ್, ಎಚ್ಬಿಎ1ಸಿ, ಲಿವರ್ ಫಂಕ್ಷನ್ ಟೆಸ್ಟ್, ಯೂರಿಕ್ ಆಸಿಡ್, ಇಸಿಜಿ, ಎಕೋ/ಟಿಎಂಟಿ ಹಾಗೂ ತಜ್ಞ ವೈದ್ಯರ ಸಮಾಲೋಚನೆ ಒಳಗೊಂಡಿದೆ.









